ನಿಮಗೆ ಹೀಗಾಗುತ್ತಿದ್ದರೆ ಅದು ಮಾನಸಿಕ ಖಿನ್ನತೆಯ ಲಕ್ಷಣಗಳು

ಮಂಗಳವಾರ, 16 ಜೂನ್ 2020 (09:28 IST)
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಸುಶಾಂತ್ ಸಿಂಗ್ ರಜಪೂತ್ ಎಂಬ ನಟ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಇದುವೇ ಅವರ ಸಾವಿಗೆ ಕಾರಣವಾಯಿತು ಎಂಬ ಚರ್ಚೆಯೂ ನಡೆಯುತ್ತಿದೆ. ಅಷ್ಟಕ್ಕೂ ಡಿಪ್ರೆಷನ್ ಅಥವಾ ಖಿನ್ನತೆಗೊಳಗಾಗಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ?


ಜೀವನದಲ್ಲಿ ವೃತ್ತಿ ಅಥವಾ ವೈಯಕ್ತಿಕ ಬದುಕಿನಲ್ಲಿ ಅಭದ್ರತೆ, ಕಷ್ಟ-ನಷ್ಟಗಳಾದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ. ಒಂದು ವೇಳೆ ಈ ಸಂದರ್ಭದಲ್ಲಿ ನಮಗೆ ಮಾನಸಿಕವಾಗಿ ಆಸರೆ ದೊರೆತರೆ ದುಃಖದಿಂದ ಹೊರಬರಬಹುದು. ಇಲ್ಲದೇ ಹೋದರೆ ಮತ್ತಷ್ಟು ಕುಗ್ಗಿಹೋಗುತ್ತೇವೆ. ಇದು ಮಾನಸಿಕ ಖಿನ್ನತೆಗೆ ದಾರಿಯಾಗುತ್ತದೆ.

ಆಗಾಗ ಮೂಡ್ ಬದಲಾಗುವುದು. ಈಗ ಇರುವಂತೆ ಇನ್ನೊಂದು ಕ್ಷಣ ಇಲ್ಲದೇ ಇರುವುದು, ತೀರಾ ಭಾವುಕರಾಗುವುದು, ಸಣ್ಣ ವಿಚಾರಕ್ಕೆ ಅಳುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವಾ ಪ್ರತಿಕ್ರಿಯಿಸದೇ ಇರುವುದು. ನಿಮಗೆ ಯಾವತ್ತೂ ಇಷ್ಟವೆನಿಸುತ್ತಿದ್ದ ಕೆಲಸಗಳಲ್ಲಿ, ತಿಂಡಿ-ತಿನಿಸುಗಳಲ್ಲಿ ಅಥವಾ ಯಾವುದೇ ಚಟುವಟಿಕೆಗಳಲ್ಲಿ ನಿರಾಸಕ್ತಿ ಮೂಡುವುದು. ಯೋಚಿಸುವ ಶಕ್ತಿ ಕುಂಠಿತವಾಗುವುದು, ನಿದ್ರಾ ಹೀನತೆ, ಬೇಗನೇ ಸುಸ್ತಾದಂತಾಗುವುದು ಇತ್ಯಾದಿ ಮಾನಸಿಕ ಖಿನ್ನತೆಯ ಲಕ್ಷಣಗಳು.

ಆದರೆ ಇದನ್ನು ಹಾಗೆಯೇ ಬಿಟ್ಟರೆ ಆ ವ್ಯಕ್ತಿ ಅತಿರೇಕದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬಹುದು. ಅಂತಹ ಸಂದರ್ಭದಲ್ಲಿ ಸಂಕೋಚವಿಲ್ಲದೇ ನಿಮಗೆ ಏನಾಗುತ್ತಿದೆ ಎನ್ನುವುದನ್ನು ಆಪ್ತರ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಆದರೆ ಇದೊಂದು ಮಾನಸಿಕ ಖಾಯಿಲೆ ಎಂದು ಆ ವ್ಯಕ್ತಿಯನ್ನು ದೂರ ತಳ್ಳಿದರೆ ಅದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ