ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ : ಚೀನಾ

ಬುಧವಾರ, 17 ಆಗಸ್ಟ್ 2022 (12:38 IST)
ಬೀಜಿಂಗ್ : ಚೀನಾದ ಸಂಶೋಧನಾ ನೌಕೆ ಮಂಗಳವಾರ ಶ್ರೀಲಂಕಾವನ್ನು ತಲುಪಿದ್ದು, ಅದು ನಡೆಸುವ ಚಟುವಟಿಕೆ ಯಾವುದೇ ದೇಶಗಳಿಗೂ ತೊಂದರೆ ಕೊಡುವುದಿಲ್ಲ ಎಂದು ಚೀನಾ ಭರವಸೆ ನೀಡಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಯುವಾನ್ ವಾಂಗ್ 5 ಹಡಗು ಶ್ರೀಲಂಕಾದ ಸಹಕಾರದಿಂದಾಗಿ ಯಶಸ್ವಿಯಾಗಿ ಹಂಬನತೋಟಾ ಬಂದರಿನಲ್ಲಿ ಲಂಗರು ಹಾಕಿದೆ. ಚೀನಾದಿಂದ ಸಾಲ ಪಡೆದು ದಿವಾಳಿಯಾಗಿರುವ ಶ್ರೀಲಂಕಾಗೆ ಬೆಂಬಲ ವಿಸ್ತರಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.

ಚೀನಾ ಕಳುಹಿಸಿರುವ ಹಡಗಿನ ಬಗ್ಗೆ ಭಾರತ ಹಾಗೂ ಅಮೆರಿಕ ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರತಿಕ್ರಿಯಿಸಿದ ವಾಂಗ್, ಯುವಾನ್ ವಾಂಗ್ 5 ಹಡಗು ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಬದ್ಧವಾಗಿದೆ. ಇದನ್ನು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು ಸಾಂಪ್ರದಾಯಿಕ ಅಭ್ಯಾಸ ಎಂದರು. 

ಹಡಗಿನ ಕಾರ್ಯಾಚರಣೆ ಯಾವುದೇ ದೇಶದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮ್ಮ ಕಾರ್ಯಾಚರಣೆಗೂ ಯಾವುದೇ ದೇಶಗಳು ಅಡ್ಡಿ ಪಡಿಸಬಾರದು ಎಂದು ವಿನಂತಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ