ಚೆನ್ನೈ: ಭಾರತದಲ್ಲಿ ಲೋಕಸಭೆ ಚುನಾವಣೆಯ ಭರಾಟೆಯ ಮಧ್ಯೆಯೂ ಇಂಡಿಯನ್ ಪ್ರೀಮಿಯಲ್ ಲೀಗ್‌ನ 17ನೇ ಆವೃತ್ತಿ ಯಶಸ್ವಿಯಾಗಿ ನಡೆದಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿ ಟ್ರೋಫಿಯೊಂದಿಗೆ ₹ 20 ಕೋಟಿ ಬಹುಮಾನ ಗೆದ್ದುಕೊಂಡಿತು.
ಇದೀಗ ಐಪಿಎಲ್ ಟೂರ್ನಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಪಂದ್ಯಗಳು ನಡೆದ 10 ಕ್ರೀಡಾಂಗಣಗಳ ಮೈದಾನ ಸಿಬ್ಬಂದಿ ಹಾಗೂ ಪಿಚ್ ಕ್ಯುರೇಟರ್‌ಗಳಿಗೆ ಬಿಸಿಸಿಐ ಬಂಪರ್ ಉಡುಗೊರೆ ಘೋಷಣೆ ಮಾಡಿದೆ. 10 ಕ್ರೀಡಾಂಗಣದ ಸಿಬಂದಿಗೆ ತಲಾ ₹25 ಲಕ್ಷದಂತೆ ಘೋಷಣೆ ಮಾಡಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಈ ಬಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಕ್ರೀಡಾಂಗಣದ ಸಿಬ್ಬಂದಿಯನ್ನು ಅಸಾಧಾರಣ ಹೀರೋಗಳು ಎಂದು ಅವರು ಕೊಂಡಾಡಿದ್ದಾರೆ.
ಈ ಬಾರಿ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅದ್ಭುತವಾದ ಪಿಚ್‌ಗಳನ್ನು ಒದಗಿಸಲು ಮೈದಾನ ಸಿಬ್ಬಂದಿಕೆಲಸ ಮಾಡಿದ್ದಾರೆ. ಮೆಚ್ಚುಗೆಯ ಸಂಕೇತವಾಗಿ ಐಪಿಎಲ್ ಪಂದ್ಯಗಳು ನಡೆದ 10 ಕ್ರೀಡಾಂಗಣದ ಮೈದಾನ ಸಿಬ್ಬಂದಿಗಳು ಹಾಗೂ ಕ್ಯುರೇಟರ್‌ಗಳಿಗೆ ತಲಾ ₹ 25 ಲಕ್ಷ ಬಹುಮಾನ ನೀಡಲಾಗುತ್ತದೆ. 3 ಹೆಚ್ಚುವರಿ ಕ್ರೀಡಾಂಗಣದ ಸಿಬ್ಬಂದಿಗೆ ₹10 ಲಕ್ಷ ನೀಡಲಾಗುತ್ತದೆ ಎಂದು ಹೇಳಿದ್ದಾರೆ.