ಲಖನೌ: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಾಚೆಯ ತಾಣಗಳಲ್ಲಿ ಮೊದಲ ಸೋಲು ಅನುಭವಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.
ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ 42 ರನ್‌ಗಳಿಂದ ಆರ್‌ಸಿಬಿ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಪಂದ್ಯದಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆರ್‌ಸಿಬಿ ಆಸೆ ಕುಸಿದಿದೆ. ಭಾರೀ ಅಂತರದಿಂದ ಸೋಲು ಕಂಡಿದ್ದರಿಂದ ಆರ್‌ಸಿಬಿ ರನ್ ರೇಟ್ ಕಡಿಮೆ ಆಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 19.5 ಓವರ್‌ಗಳಲ್ಲಿ 189 ರನ್‌ಗಳೊಗೆ ಆಲೌಟ್ ಆಯಿತು.
ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ ಸೊಗಸಾದ ಆಟದ ಪ್ರದರ್ಶನ ನೀಡಿದರು. ಉತ್ತಮ ಲಯದಲ್ಲಿದ್ದ ವಿರಾಟ್ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿದರು.
ಗಾಯದ ಸಮಸ್ಯೆಯಿಂದ ಕಳೆದ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ಫಿಲ್ ಸಾಲ್ಟ್ ಅಬ್ಬರಿಸಿದರು. ಇವರು 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ 62 ರನ್ ಸಿಡಿಸಿದರು. ನಾಯಕ ಜಿತೇಶ್ ಶರ್ಮಾ 24 ರನ್ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆರ್‌ಸಿಬಿ ರನ್ ಕಲೆ ಹಾಕುವಲ್ಲಿ ವಿಫಲವಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ (34) ಹಾಗೂ ಟ್ರಾವಿಸ್ ಹೆಡ್ (17) ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 54 ರನ್ ಸಿಡಿಸಿದರು. ಮೂರನೇ ವಿಕೆಟ್‌ಗೆ ಇಶಾನ್ ಕಿಶನ್ (ಅಜೇಯ 94) ಹಾಗೂ ಭರವಸೆಯ ಆಟಗಾರ ಹ್ಯಾನ್ರಿಕ್ ಕ್ಲಾಸೇನ್ (24) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.