ದುಬೈ: ಐಪಿಎಲ್ 14 ರಲ್ಲಿ ಈ ಬಾರಿ ಇಂತಹದ್ದೇ ತಂಡ ಚಾಂಪಿಯನ್ ಆಗಬಹುದು ಎಂದು ಊಹಿಸಲೂ ಆಗದ ಪರಿಸ್ಥಿತಿಯಿದೆ. ಯಾಕೆಂದರೆ ಈಗ ಪ್ಲೇ ಆಫ್ ಗೇರಿದ ಎಲ್ಲಾ ತಂಡಗಳೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರಬಲ.
ಈ ಪೈಕಿ ಡೆಲ್ಲಿ ಅತ್ಯಂತ ಹೆಚ್ಚು ಪ್ರಬಲ ಎನ್ನಬಹುದು. ಲೀಗ್ ಹಂತದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಸರ್ವಾಂಗೀಣ ಪ್ರದರ್ಶನ ತೋರಿದೆ. ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಐಯರ್, ರಿಷಬ್ ಪಂತ್ ಇವರು ಬ್ಯಾಟಿಂಗ್ ದೈತ್ಯರು.
ಆದರೆ ಚೆನ್ನೈಗೆ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿದೆ. ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಧೋನಿ ವೈಫಲ್ಯ ಕಾಣುತ್ತಿರುವುದು ತಂಡದ ದೊಡ್ಡ ವೀಕ್ನೆಸ್. ಋತುರಾಜ್ ಗಾಯಕ್ ವಾಡ್ ಮತ್ತು ರವೀಂದ್ರ ಜಡೇಜಾ ಹಾಗೂ ಬ್ರಾವೋರನ್ನೇ ಚೆನ್ನೈ ನೆಚ್ಚಿ ಕೂತಿದೆ.
ಅತ್ತ ಕೋಲ್ಕೊತ್ತಾಗೆ ವೆಂಕಟೇಶ್ ಐಯರ್, ಶುಬ್ನಂ ಗಿಲ್ ಬ್ಯಾಟಿಂಗ್ ಶಕ್ತಿಯಾದರೆ ಬೌಲಿಂಗ್ ನಲ್ಲಿ ವರುಣ್ ಚಕ್ರವರ್ತಿ, ಫರ್ಗ್ಯುಸನ್ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಮಿಂಚಿದಾಗಲೆಲ್ಲಾ ತಂಡ ಗೆದ್ದಿದೆ.
ಆರ್ ಸಿಬಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ದೇವದತ್ತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಎಬಿಡಿ ಇನ್ನೂ ಸಿಡಿದಿಲ್ಲ. ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ಕೀ ಆಟಗಾರರು. ಡೆಲ್ಲಿ ಹೊರತುಪಡಿಸಿದರೆ ಉಳಿದೆಲ್ಲಾ ತಂಡಗಳಿಗೂ ಕಡಿವಾಣ ಹಾಕುವ ಸಾಮರ್ಥ್ಯ ಸದ್ಯದ ಮಟ್ಟಿಗೆ ಆರ್ ಸಿಬಿ ಬಳಿಯಿದೆ. ಹೀಗಾಗಿ ಈ ಬಾರಿ ತಮಗೆ ಸಿಕ್ಕ ಅವಕಾಶವನ್ನು ಕೊಹ್ಲಿ ಬಳಗ ಸರಿಯಾಗಿ ಬಳಸುತ್ತಾ ನೋಡಬೇಕಿದೆ.