ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರು ಕಿರುತೆರೆಯ ಅತ್ಯಂತ ದೊಡ್ಡ ಶೋ ಬಿಗ್‌ಬಾಸ್ ಸೀಸನ್ 11ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಇದೀಗ ಎರಡು ದೂರು ದಾಖಲಾಗಿದೆ. ಕಳೆದ ಬಿಗ್‌ಬಾಸ್ ಸೀಸನ್‌ನಲ್ಲಿ ಹುಲಿ ಉಗುರು ವಿಚಾರವಾಗಿ ವರ್ತೂರ್ ಸಂತೋಷ್ ಅವರನ್ನು ವಶಕ್ಕೆ ಪಡೆಯಲಾಯಿತು. ಪ್ರತಿ ಸೀಸನ್ ಕೂಡಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗಿದೆ. ಈ ಬಾರಿ ಸ್ಪರ್ಧಿಗಳಿಗೆ ಬದುಕಲು ಬೇಕಾಗಿರುವ ಅಗತ್ಯ ವಸ್ತು ಹಾಗೂ ಸ್ವಾತಂತ್ರ್ಯವನ್ನು ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪ ವ್ಯಕ್ತವಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆಯಡಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎನ್ನುವವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ವಕೀಲೆ ರಕ್ಷಿತಾ ಸಿಂಗ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ದೂರು ನೀಡಿದ್ದಾರೆ.
ರಕ್ಷಿತಾ ಸಿಂಗ್ ನೀಡಿರುವ ದೂರಿನಲ್ಲಿ, ಬಿಗ್ ಬಾಸ್ ಸೀಸನ್ 11 ಶೋನಲ್ಲಿ ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸಲು ಹಕ್ಕನ್ನು ಹೊಂದಿರುವುದಿಲ್ಲ ಎಂದು ದೂರಿದ್ದಾರೆ.
ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಜೈಲಿನ ಮಾದರಿಯಲ್ಲಿರುವ ಬಂಧಿಖಾನೆಯಂತಹ ಕೊಠಡಿಯಲ್ಲಿ ಹತ್ತಾರು ಕ್ಯಾಮೆರಾಗಳಲ್ಲಿ ಚಿತ್ರೀಕರಣವಾಗುವಂತೆ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಸ್ಪರ್ಧಿಗಳಿಗೆ ಕೇವಲ ಗಂಜಿಯನ್ನು ಆಹಾರವನ್ನಾಗಿ ನೀಡುತ್ತಿದ್ದು, ಸಂವಿಧಾನದ ಪ್ರಕಾರ ನಾಗರಿಕರಿಗೆ ಪೌಷ್ಠಿಕ ಆಹಾರ ಕೊಡದೇ ಇರುವುದು ಅಪರಾಧವಾಗುತ್ತದೆ ಎಂದು ಹೇಳಲಾಗಿದೆ.