ಮಹೇಶ್ ಬಾಬು ಮಗಳ ಹೆಸರಲ್ಲಿ ನಕಲಿ ಖಾತೆ: ದೂರು ದಾಖಲು

Krishnaveni K

ಶನಿವಾರ, 10 ಫೆಬ್ರವರಿ 2024 (16:19 IST)
ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂ ಖಾತೆಯೊಂದನ್ನು ತೆರೆಯಲಾಗಿದ್ದು ದೂರು ದಾಖಲಾಗಿದೆ.

ಈಗಷ್ಟೇ ಪ್ರವರ್ಧಮಾನಕ್ಕೆ ಕಾಲಿಡುತ್ತಿರುವ ಸಿತಾರಾ ಇತ್ತೀಚೆಗಷ್ಟೇ ಆಭರಣದ ಜಾಹೀರಾತೊಂದರಲ್ಲಿ ಅಭಿನಯಿಸಿದ್ದರು. ಚಿಕ್ಕವಯಸ್ಸಿನಲ್ಲೇ ಅಭಿಮಾನಿಗಳನ್ನು ಹೊಂದಿರುವ ಸಿತಾರಾ ಅಪ್ಪನಂತೇ ಜನಪ್ರಿಯರಾಗಿದ್ದಾರೆ. ಆದರೆ ಜನಪ್ರಿಯತೆಯ ಹೊಸ್ತಿಲಲ್ಲೇ ನಕಲಿ ಖಾತೆ ಸೃಷ್ಟಿಸಿ ವಂಚನೆ ಮಾಡುತ್ತಿರುವವರ ಜಾಲ ಬೆಳಕಿಗೆ ಬಂದಿದೆ.

ಸಿತಾರಾ ಹೆಸರಿನಲ್ಲಿ ನಕಲಿ ಖಾತೆ
ಸಿತಾರಾ ಹೆಸರಿನಲ್ಲಿ ಯಾರೋ ಕಿಡಿಗೇಡಿ ನಕಲಿ ಖಾತೆ ತೆರೆದಿದ್ದಾರೆ. ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಮಹೇಶ್ ಬಾಬು ಪುತ್ರಿಯ ಫೋಟೋಗಳನ್ನು ಪ್ರಕಟಿಸಿ, ಇನ್ ವೆಸ್ಟ್ ಮೆಂಟ್, ವ್ಯಾಪಾರಕ್ಕೆ ಲಿಂಕ್ ಗಳನ್ನು ಕಳುಹಿಸುತ್ತಿದ್ದಾರೆ. ಈ ಮೂಲಕ ಸಿತಾರಾ ಹೆಸರು ಹೇಳಿಕೊಂಡು ವಂಚನೆ ಮಾಡಲಾಗುತ್ತಿದೆ. ಈ ಬಗ್ಗೆ ಮಹೇಶ್ ಬಾಬು ಟೀಂ ಸೈಬರ್ ಪೊಲೀಸರ ಗಮನಕ್ಕೆ ತಂದಿದೆ.

ಇದೀಗ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದು, ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ. ಅಷ್ಟೇ ಅಲ್ಲದೆ, ಮಹೇಶ್ ಬಾಬು ಪತ್ನಿ ನಮ್ರತಾ ಕೂಡಾ ತಮ್ಮ ಇನ್ ಸ್ಟಾ ಖಾತೆಯಲ್ಲಿ ಮಗಳ ಹೆಸರಿನಲ್ಲಿರುವ ಖಾತೆ ನೋಡಿ ಯಾರೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಸೆಲೆಬ್ರಿಟಿಗಳ ಹೆಸರು ನೋಡಿದ ತಕ್ಷಣ ಜನ ಅದನ್ನು ನಿಜವೆಂದು ನಂಬಿ ವಂಚನೆಗೊಳಗಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಇದೇ ರೀತಿ ಎಷ್ಟೋ ಮಂದಿ ಹಣ ಕಳೆದುಕೊಂಡಿದ್ದು ಇದೆ. ಇದೀಗ ಮಹೇಶ್ ಬಾಬು ಪುತ್ರಿಯ ಹೆಸರಿನಲ್ಲಿ ವಂಚಕರ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಪ್ರಿನ್ಸ್ ಕುಟುಂಬ ಎಚ್ಚೆತ್ತುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ