ಸರ್ವ ಧರ್ಮ ಸಮಾನ

ಯುಗಾದಿಯಂದು ಸ್ವಾಮಿ ವೆಂಕಟೇಶ್ವರ ಮಂದಿರದಲ್ಲಿ ಜನಜಾತ್ರೆ ತುಂಬಿತುಳುಕುತ್ತಿದ್ದರೂ, ಆದಷ್ಟು ಶೀಘ್ರದಲ್ಲಿ ದರ್ಶನ ಮುಗಿಸಿಕೊಂಡು, ಪೂಜಾರಿ ಕೊಟ್ಟ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಹೊರಬಿದ್ದ ರಾಜೇಶ್‌ನನ್ನು ಭಿಕ್ಷಕರು ಮುತ್ತಿಕೊಂಡರು.

ಎಲ್ಲರಿಂದ ತಪ್ಪಿಸಿಕೊಂಡು ಹೊರಬಂದ ರಾಜೇಶ್‌ನಿಗೆ ''ರೀ..ಏನ್ರಿ ಅಲ್ಲಿ ನೋಡಿ ಭಿಕ್ಷಾ ಪಾತ್ರೆಯನ್ನು ಎದುರಿಟ್ಟುಕೊಂಡು ಭಿಕ್ಷೆ ಕೇಳದೆ ಭಗವಂತನನ್ನು ಪ್ರಾರ್ಥಿಸುತ್ತಾ ಕಣ್ಣುಮುಚ್ಚಿ ಕುಳಿತ ಭಿಕ್ಷುಕನನ್ನು ನೋಡ್ರಿ" ಎಂದು ಗಂಡನಿಗೆ ಹೇಳಿದಳು ಮಾಲತಿ.

ಆ ಭಿಕ್ಷುಕನನ್ನು ನೋಡಿದ ರಾಜೇಶ್‌ನಿಗೆ ಯಾಕೊ ಭಿಕ್ಕೆ ಹಾಕಬೇಕು ಎಂದೆನಿಸಿ ಜೇಬಿನಿಂದ ರೂಪಾಯಿ ನಾಣ್ಯವನ್ನು ತೆಗೆದು ಭಿಕ್ಷುಕನ ಪಾತ್ರೆಗೆ ಹಾಕಿ ಆಫೀಸಿಗೆ ಹೊರಟ.

ಸ್ಕೂಟರ್ ಮೇಲೆ ಸಾಗುತ್ತಿದ್ದ ರಾಜೇಶ್‌ಗೆ ದಾರಿಯಲ್ಲಿ ಒಬ್ಬ ವ್ಯಕ್ತಿ ''ಸಾರ್ ಅರ್ಜೆಂಟು ಮಸೀದಿಗೆ ಹೋಗಬೇಕು ನಮಾಜ್‌ ಸಮಯವಾಗಿದೆ. ದಯವಿಟ್ಟು ಮಸೀದಿಯವರೆಗೂ ಲಿಫ್ಟ್ ಕೊಡಿ ಸಾರ್ ಎಂದು ಅಂಗಲಾಚಿದ. ಆತನಿಗೆ ಇಲ್ಲವೆನ್ನಲಾಗದೇ ಸ್ಕೂಟರ್‌ ಮೇಲೆ ಕೂರಿಸಿಕೊಂಡು ಮಸೀದಿಯವರೆಗೆ ಡ್ರಾಪ್ ಮಾಡಿದನು. ಆತ ಇಳಿದ ಬಳಿಕ ಸ್ಕೂಟರ್ ಸ್ಟಾರ್ಟ್ ಮಾಡಲೆಂದು ಕಿಕ್ ಹೊಡೆಯುವಾಗ ಮಸೀದಿಯ ಎದುರಿನಲ್ಲಿ ಕುಳಿತ ಫಕೀರನನ್ನು ಹಾಗೇ ನೋಡುತ್ತಾ ನಿಂತು ಬಿಟ್ಟ.

ಈ ಫಕೀರನನ್ನು ಎಲ್ಲೊ ನೋಡಿದಂತಿದೆಯಲ್ಲ! ಹಾಂ ನೆನಪಿಗೆ ಬಂತು, ಯುಗಾದಿ ಹಬ್ಬದಂದು ವೆಂಕಟೇಶ್ವರ ಮಂದಿರದ ಎದುರು ಮೈತುಂಬಾ ನಾಮ ಬಳಿದು ಕುಳಿತಿದ್ದ ಭಿಕ್ಷುಕ! ಆತನೇ ಇವನೆಂದು ತಿಳಿಯಿತು. 'ಎಷ್ಟು ಮೋಸ' ಎಂದುಕೊಂಡು ಫಕೀರನ ಹತ್ತಿರಕ್ಕೆ ತೆರಳಿ '' ಉಗಾದಿ ಹಬ್ಬದಂದು ವೆಂಕಟೇಶ್ವರ ಮಂದಿರದ ಎದುರು ನಾಮವನ್ನು ಬಳಿದು ಕುಳಿತಿದ್ದವನು ನೀನೆ ಅಲ್ಲವೇ? ಎಂದು ಕೇಳಿದನು. ''ಹೌದು ನಾನೇ" ಎಂದು ತಡವರಿಸುತ್ತಾ ಉತ್ತರಿಸಿದ ಫಕೀರ.

''ಅಲ್ಲ ನೀನು ಹಿಂದೂವೋ? ಇಲ್ಲ ಮುಸ್ಲಿಮಾ?" ರಾಜೇಶ್ ಪ್ರಶ್ನಿಸಿದ.

"ತಂದೇ ನಾನೊಬ್ಬ ಭಿಕ್ಷುಕ...ನನ್ನ ಹೊಟ್ಟೆ ತುಂಬಿಕೊಳ್ಳಲು ಹಬ್ಬದ ದಿನ ಮಂದಿರದ ಬಳಿ ಭಕ್ತಿಯಿಂದ ಕುಳಿತು ಭಿಕ್ಷೆ ಬೇಡುತ್ತೇನೆ. ಶುಕ್ರವಾರದಂದು ಮಸೀದಿಯ ಬಳಿ ಫಕೀರನಾಗುತ್ತೇನೆ. ರವಿವಾರದಂದು ಚರ್ಚಿನ ಬಳಿ ಕ್ರೈಸ್ತನಾಗಿ ಬೇಡುತ್ತೇನೆ ಸ್ವಾಮಿ" ಎಂದು ಭಿಕ್ಷುಕ ನಿಜವನ್ನೇ ಹೇಳಿದ.

ಸರ್ವ ಮತ ಪಂಥಗಳನ್ನು ಸಮಾನ ಎಂದ ಅವನನ್ನು ಅಭಿನಂದಿಸಲೇ? ಅಥವಾ ವೇಷ ಮರೆಸಿ ಮೋಸ ಮಾಡುತ್ತಾನೆಂದು ಬಯ್ಯಬೇಕೆ? ಯಾವುದನ್ನೂ ನಿರ್ಧರಿಸಲಾಗದೇ ಮೌನಕ್ಕೆ ಮೊರೆ ಹೋದ ರಾಜೇಶ್.

ವೆಬ್ದುನಿಯಾವನ್ನು ಓದಿ