ಕೇಂದ್ರದ ಸಹಾಯವಿಲ್ಲದೇ ಪ್ರಜ್ವಲ್ ರೇವಣ್ಣನನ್ನು ಬಂಧಿಸುವುದು ಹೇಗೆ ಎಂದು ಉಪಾಯ ಕೊಟ್ಟ ಅಣ್ಣಾಮಲೈ

Krishnaveni K

ಶನಿವಾರ, 4 ಮೇ 2024 (09:51 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೇಂದ್ರ ಸರ್ಕಾರದ ಸಹಾಯವಿಲ್ಲದೇ ಬಂಧಿಸುವುದು ಹೇಗೆ ಎಂದು ತಮಿಳುನಾಡು ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಪಾಯವೊಂದನ್ನು ವಿವರಿಸಿದ್ದಾರೆ.

ಈ ಹಿಂದೆ ತಾವು ಪೊಲೀಸ್ ಅಧಿಕಾರಿಯಾಗಿದ್ದಾಗ ಭೂಗತ ಪಾತಕಿ ಬನ್ನಂಜೆ ರಾಜನನ್ನು ಸೆರೆಹಿಡಿದ ಮಾದರಿಯಲ್ಲಿ ಪ್ರಜ್ವಲ್ ರನ್ನು ಬಂಧಿಸಬಹುದು ಎಂದು ಅಣ್ಣಾಮಲೈ ವಿವರಿಸಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು ಪ್ರಜ್ವಲ್ ರನ್ನು ಬಂಧಿಸಲು ನೆರವಾಗುವಂತೆ ಕೋರಿದ್ದರು.

ಆದರೆ ಇದೂ ಒಂದು ರಾಜಕೀಯದ ಭಾಗ ಎಂದು ಬಿಜೆಪಿ ಆರೋಪಿಸಿದೆ. ಕೊನೆಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿಲ್ಲವೆಂದು ಗೂಬೆ ಕೂರಿಸಲು ಸಿದ್ದರಾಮಯ್ಯ ಪತ್ರದ ನಾಟಕವಾಡಿದ್ದಾರೆ ಎಂದಿದೆ. ಇದೀಗ ಬಿಜೆಪಿ ನಾಯಕರೂ ಆಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಪ್ರಜ್ವಲ್ ನನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ನೀಡಲು ಅಥವಾ ಇಂಟರ್ ಪೋಲ್ ಸಹಾಯ ಪಡೆಯಲು ಸಿದ್ದರಾಮಯ್ಯ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು. ಅದರ ಬದಲು ಪ್ರಧಾನಿಗೆ ಪತ್ರ ಬರೆದರೆ ಏನೂ ಪ್ರಯೋಜನವಿಲ್ಲ. ಇದು ರಾಜಕೀಯ ಲಾಭಕ್ಕೆ ಬರೆದ ಪತ್ರ ಎಂದು ಟೀಕಿಸಿದ್ದಾರೆ.

ಎಸ್ಐಟಿ ಅಥವಾ ಸಿಐಡಿ ಸಿಬಿಐಗೆ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ. ವಿದೇಶಕ್ಕೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಸೆರೆಹಿಡಿಯಲು ರೆಡ್ ಕಾರ್ನರ್ ನೋಟಿಸ್ ನೀಡಲು ಅಥವಾ ಇಂಟರ್ ಪೋಲ್ ಸಹಾಯ ಪಡೆಯು ರಾಜ್ಯ ಸಿಬಿಐ ನಿರ್ದೇಶಕರಿಗೆ ಪತ್ರ ಬರೆಯಬೇಕು. ಬಳಿಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುತ್ತದೆ.

ಅದರಂತೆ ಆರೋಪಿ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೆ ತಕ್ಷಣ ಅಲ್ಲಿ ಬಂಧಿಸಿ ಅವರು ಯಾವ ಠಾಣೆಗೆ ಬೇಕಾಗಿದ್ದಾರೋ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ನಾನು ಈ ಹಿಂದೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಬನ್ನಂಜೆ ರಾಜನನ್ನು ಮೊರಕ್ಕೊದಿಂದ ಇದೇ ರೀತಿ ಸೆರೆಹಿಡಿದಿದ್ದೆವು. ಇಂಟರ್ ಪೋಲ್ ಮೂಲಕ ವಿದೇಶದಲ್ಲಿದ್ದ ಆರೋಪಿಯನ್ನು ಮೊದಲು ಸೆರೆಹಿಡಿದ ಖ್ಯಾತಿ ಕರ್ನಾಟಕದ್ದು. ಹೀಗಿರುವಾಗ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿರುವುದು ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಮಾತ್ರ ಎಂದು ಅಣ್ಣಾಮಲೈ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ