ಎಚ್‌ಡಿಕೆಗೆ ಮತ್ತೊಂದು ಸಂಕಷ್ಟ: ಕೇಂದ್ರ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮತ್ತೆ ಅನುಮತಿ ಕೋರಿದ ಎಸ್‌ಐಟಿ

Sampriya

ಬುಧವಾರ, 26 ಫೆಬ್ರವರಿ 2025 (15:09 IST)
Photo Courtesy X
ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ  ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ವಿಶೇಷ ತನಿಖಾ ತಂಡ ರಾಜ್ಯಪಾಲರಿಂದ ಅನುಮತಿ ಕೋರಿದೆ.

ಮಾಜಿ ಮುಖ್ಯಮಂತ್ರಿಯೂ ಆಗಿರುವ ಕುಮಾರಸ್ವಾಮಿ ವಿರುದ್ಧ ಈ ಹಿಂದೆಯೇ ರಾಜ್ಯಪಾಲರ ಅನುಮತಿ ಕೇಳಲಾಗಿತ್ತು. ಕನ್ನಡದಲ್ಲಿದ್ದ ದೋಷಾರೋಪ ಪಟ್ಟಿಯನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಲು ರಾಜ್ಯಪಾಲರು ಸೂಚಿಸಿದ್ದರು. ಅದರಂತೆ ದೋಷಾರೋಪ ಪಟ್ಟಿಯನ್ನು ಸಂಪೂರ್ಣವಾಗಿ ತರ್ಜುಮೆ ಮಾಡಿದ್ದಾರೆ.

 ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 4,500 ಪುಟಗಳ ದೋಷಾರೋಪ ಪಟ್ಟಿ ತರ್ಜುಮೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು ಅದನ್ನು ರಾಜಭವನಕ್ಕೆ ತಲುಪಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದಾರೆ.

2007ರಲ್ಲಿ ಅಂದು ಸಿಎಂ ಆಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿ ನಲ್ಲಿ 550 ಎಕರೆ ಭೂಮಿಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ಮಂಜೂರಾತಿ ನೀಡಿದ ಆರೋಪದ ಮೇರೆಗೆ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು 20230 ನವೆಂಬರ್‌ನಲ್ಲಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಅಧಿಕಾರಿಗಳು ಪತ್ರ ಬರೆದಿದ್ದರು. ಆದರೆ ಈ ಪ್ರಕರಣದಲ್ಲೂ ಸ್ಪಷ್ಟಿಕರಣ ಕೇಳಿದ್ದ ರಾಜ್ಯಪಾಲರು, ಕೊನೆಗೆ ಭಾಷಾ ತೊಡಕಿನ ತಾಂತ್ರಿಕ ಕಾರಣ ನೀಡಿ ಕಡತವನ್ನು ವಾಪಸ್ ಕಳುಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ