ಹೈದರಾಬಾದ್: ಕಚೇರಿಗೆ ಪ್ರವೇಶಿಸಿದ ತೆಲಂಗಾಣ ಜಾಗೃತಿ ಸದಸ್ಯರ ಗುಂಪನ್ನು ಚದುರಿಸಲು ಎಂಎಲ್‌ಸಿ ತಿನ್ಮಾರ್ ಮಲ್ಲಣ್ಣ ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.
ಮಲ್ಲಣ್ಣ ಅವರು ಇತ್ತೀಚೆಗೆ ಬಿಆರ್‌ಎಸ್ ನಾಯಕಿ ಕವಿತಾ ವಿರುದ್ಧ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ, ತೆಲಂಗಾಣ ಜಾಗೃತಿ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ, ಮೆಡಿಪಲ್ಲಿಯಲ್ಲಿರುವ ಮಲ್ಲಣ್ಣ ಅವರ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ.
ಘಟನೆ ನಡೆದಾಗ ಮಲ್ಲಣ್ಣ ಅವರು ಕಚೇರಿಯಲ್ಲಿ ಇದ್ದರು ಎನ್ನಲಾಗಿದೆ.
ಕವಿತಾ ವಿರುದ್ಧದ ಹೇಳಿಕೆಯಿಂದ ಆಕ್ರೋಶಗೊಂಡ ತೆಲಂಗಾಣ ಜಾಗೃತಿಯ ಸದಸ್ಯರ ಗುಂಪೊಂದು ಅವರ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ. ಅಲ್ಲದೇ ಅವರು ಕಚೇರಿಯಲ್ಲಿದ್ದ ಕೆಲವು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಗನ್‌ಮ್ಯಾನ್ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ, ಹಲವು ಮಂದಿ ಪ್ರತಿಭಟನಾಕಾರರು ಆವರಣದೊಳಗೆ ಸಿಬ್ಬಂದಿ ಮೇಲೆ ದಾಳಿ ಮಾಡುತ್ತಿರುವುದು ಮತ್ತು ಆ ಗುಂಪನ್ನು ಚದುರಿಸಲು ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ಕಂಡುಬಂದಿದೆ.