ಸಣ್ಣ ವಯಸ್ಸಿನವರ ಹೃದಯಾಘಾತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರಿವಿನ ಪಾಠ

ಗುರುವಾರ, 30 ಸೆಪ್ಟಂಬರ್ 2021 (21:59 IST)
ಬೆಂಗಳೂರು: ಮೂವತ್ತು-ನಲವತ್ತು ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು,  ವಿಶ್ವ ಹೃದಯ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಶೈಲಿಯ ಬಗ್ಗೆ ಅನೇಕರು ಅರಿವಿನ ಕಿವಿಮಾತು ಹೇಳಿದ್ದಾರೆ. 
 
ಇತೀಚೆಗಷ್ಟೇ ಬಿಗ್​ ಬಾಸ್​ ವಿನ್ನರ್ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ​ದ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿಕ್ಕ ವಯಸ್ಸಿಗೆ ಹೃದಯದ ತೊಂದರೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಕೂ ವಿನಲ್ಲಿ ಸಾಮಾನ್ಯ ಜನರು, ಫಿಟ್ನೆಸ್ ತಜ್ಞರು, ವೈದ್ಯರು ತಮ್ಮ ಅರಿವಿನ ಮಾತುಗಳನ್ನು #ಇದುಹೃದಯಗಳವಿಷಯ  ಹಾಗು #ವಿಶ್ವಹೃದಯದಿನ ಹ್ಯಾಷ್ ಟ್ಯಾಗ್ ಅಡಿ ಹಂಚಿಕೊಂಡಿದ್ದಾರೆ. 
 
ಭಾರತ ಹೃದ್ರೋಗದ ರಾಜಧಾನಿ! 
 
ಇದು ತೀರಾ ಗಂಭೀರ ವಿಷಯ. ಕಳೆದೈದು ವರ್ಷದಲ್ಲಿ 54% ಹೆಚ್ಚು ಹೃದಯಾಘಾತದ ಸಾವುಗಳಾಗಿವೆ,ಚಿಕಿತ್ಸೆಯೂ ಸುಲಭವೇ,ನಾವು ಗೋಜಲು ಮಾಡುತ್ತಿದ್ದೇವೆ. ಒತ್ತಡ ,ಉದ್ವೇಗ ಮತ್ತು ಅಧಿಕ ದೇಹತೂಕ ಬೇಡ. ಹಿತ ಮಿತ ವಾಗಿ ಎಲ್ಲಾ ತರಹದ ಊಟವಿರಲಿ  ಹೆಚ್ಚು ಬೇಕರಿ,ಎಣ್ಣೆ ಮತ್ತು ಫ್ರಿಡ್ಜ್ ತಿನಿಸು ಬೇಡ. ವಾರಕ್ಕೆ ನಾಲ್ಕೈದು ದಿನ ವ್ಯಾಯಾಮ ಅಥವಾ ನಡುಗೆ. ಉತ್ತಮ ನಿದ್ರೆ,ಆದರೆ ಆಟ ಎಂದು ಮಂಜುನಾಥ್ ಎನ್ನುವವರು ಕೂ  ಮಾಡಿದ್ದಾರೆ. 
 
ಹೃದಯದ ಆರೋಗ್ಯಕ್ಕೆ ನಿತ್ಯ ನೀವು ಸೇವಿಸುವ ಆಹಾರದ ಪ್ರಭಾವ ಹೆಚ್ಚು. ಬಾದಾಮಿ ಹೃದಯ ರಕ್ಷಕ ಆಹಾರ. ಆದರೆ ಕೇವಲ ಬಾದಾಮಿ ಮಾತ್ರವಲ್ಲ. ಇನ್ನೂ ಹಲವು ಆಹಾರಕ್ಕೆ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ. ಕೆಲವು ಹೃದಯ ರೋಗ ಬಾರದಂತೆ ತಡೆದರೆ ಇನ್ನೂ ಹಲವು ಅಪಾಯದ ಹಂತ ತಲುಪುವುದನ್ನು ತಡೆಯುತ್ತವೆ. ಬಟರ್‌ಫ್ರೂಟ್‌ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ ಎಂದು ಅಜಯ್ ಎನ್ನುವವರು ಹೇಳಿದ್ದಾರೆ.
 
ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು ಮತ್ತು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮದ ಕೊರತೆ, ವಾಯು ಮಾಲಿನ್ಯ ಮುಂತಾದವು ಇದಕ್ಕೆ ಕಾರಣವಾಗಿದೆ. ಕೋವಿಡ್ ಮಹಾಮಾರಿಯ ಭಯದಲ್ಲಿಯೇ ಬದುಕು ಕಟ್ಟಿಕೊಂಡಿರುವ ನಾವು, ಸಾಂಕ್ರಾಮಿಕ ರೋಗವಲ್ಲದ ಹೃದಯ ಸಂಬಂಧಿ ರೋಗದೊಂದಿಗೂ ಹೋರಾಟ ನಡೆಸಬೇಕಾದ  ಅನಿವಾರ್ಯತೆ ಎದುರಾಗಿದೆ ಎಂದು ತನುಷಾ ಕೂ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ