ಬೆಂಗಳೂರು: ಶಾಸಕ ರೇವಣ್ಣರ ಕುಟುಂಬ ಚಿಂತೆಯಲ್ಲಿರುವಾಗ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಟ್ರಿಪ್‌ಗೆ ಹೋಗಿ ಜಾಲಿ ಮಾಡುತ್ತಿರುವುದು ಹೇಡಿತನದಿಂದವೂ ಅಥವಾ ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎಂದು ಬಿಂಬಿಸಲು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಾದ್ಯಂತ ಭಾರೀ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇನ್ನೂ ಪ್ರಜ್ವಲ್ ರೇವಣ್ಣ ಅವರನ್ನು ಗುರುವಾರ ತಡರಾತ್ರಿ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇತ್ತ ಪ್ರಜ್ವಲ್ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಕುಮಾರಸ್ವಾಮಿ, ಸೊಸೆ ಮತ್ತು ಮೊಮ್ಮಗನ ಜತೆ ಬೆಂಗಳೂರು ಬಿಟ್ಟು ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಪ್ರಜ್ವಲ್ ಆಗಮನ ಮತ್ತು ಆ ಬಳಿಕ ನಡೆಯುವ ರಾಜಕೀಯ ಚರ್ಚೆಗಳಿಂದ ತಪ್ಪಿಸಿಕೊಳ್ಳಲು ಹಾಗೂ ಮುಜುಗರದಿಂದ ಪಾರಾಗಲು ಕುಟುಂಬ ಸಮೇತ ಪ್ರವಾಸ ಹೋಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ.
ಇನ್ನೂ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡು ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡಿದೆ.
ʼಅತ್ಯಾಚಾರ ಆರೋಪಿ ಭಾರತಕ್ಕೆ ಮರಳುವ ಸೂಚನೆ ಸಿಗುತ್ತಿದ್ದಂತೆಯೇ ಬ್ರದರ್ ಸ್ವಾಮಿಗಳು ಫ್ಯಾಮಿಲಿ ಸಮೇತ ಟ್ರಿಪ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಾಲಿ ಟ್ರಿಪ್ ಗೆ ಹೋಗಿದ್ದು, ಪ್ರಕರಣದ ಕುರಿತು ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಹೇಡಿತನವೊ ಅಥವಾ ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂದೇಶ ನೀಡುವುದಕ್ಕೋ?
ಪ್ರಜ್ವಲ್ ಪ್ರಕರಣದಲ್ಲಿ ಬ್ರದರ್ ಸ್ವಾಮಿಗಳು ಇದುವರೆಗೂ ಒಮ್ಮೆಯೂ ಹೊಣೆಗಾರಿಕೆಯಿಂದ ವರ್ತಿಸಿದ ಉದಾಹರಣೆ ಇಲ್ಲ.
ತಮ್ಮದೇ ಪಕ್ಷದ, ತಮ್ಮದೇ ಕುಟುಂಬದ ವ್ಯಕ್ತಿಯೊಬ್ಬನಿಂದ ಇಡೀ ರಾಜ್ಯವೇ ತಲೆತಗ್ಗಿಸುವ ಕೆಲಸ ನಡೆದಿದ್ದರೂ ಬ್ರದರ್ ಸ್ವಾಮಿಗಳಿಗೆ ಕಿಂಚಿತ್ ಪಶ್ಚಾತ್ತಾಪವಿಲ್ಲದೆ ಜಾಲಿ ಟ್ರಿಪ್ ಹೊಡೆಯುತ್ತಿರುವುದು ನಾಚಿಕೆಗೇಡುʼ.