ನಾಗೇಂದ್ರರನ್ನು ಎಸ್‌ಐಟಿ, ಸಿಐಡಿ ಬಿಟ್ರೂ, ಕೋರ್ಟ್ ಬಿಡಲ್ಲ: ಬಿಜೆಪಿ

Sampriya

ಗುರುವಾರ, 10 ಏಪ್ರಿಲ್ 2025 (15:35 IST)
Photo Courtesy X
ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ.ನಾಗೇಂದ್ರಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣ ಸಂಬಂದ ನಾಗೇಂದ್ರ ಸೇರಿದಂತೆ ಮೂವರಿಗೆ 1.25 ಕೋಟಿ ರೂ ದಂಡ ಪಾವತಿಸುವಂತೆ  ಸೂಚಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ದಂಡ ಪಾವತಿಸದಿದ್ದಲ್ಲಿ, ಒಂದು ವರ್ಷ ಜೈಲು ಶಿಕ್ಷೆ ಅನುಭವಿಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮಾಜಿ ಸಚಿವ ಬಿ.ನಾಗೇಂದ್ರ, ಅನಿಲ್ ರಾಜಶೇಖರ್ ಮತ್ತು ಚುಂಡೂರು ಭಾಸ್ಕರ್ ವಿರುದ್ಧ ವಿಎಸ್‌ಎಲ್ ಸ್ಟೀಲ್ಸ್ ಸಂಸ್ಥೆಯು ಚೆಕ್‌ಬೌನ್ಸ್ ಕೇಸ್ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ತೀರ್ಪು ಪ್ರಕಟಿಸಿದೆ.


ದೂರುದಾರ ವಿಎಸ್ಎಲ್ ಸ್ಟೀಲ್ಸ್ ಸಂಸ್ಥೆಯೊಂದಿಗೆ ಆರೋಪಿಗಳ ಪಾಲುದಾರಿಕೆಯ ಬಿ.ಸಿ.ಇನ್ಫ್ರಾಸ್ಟ್ರಕ್ಚರ್ ಆ್ಯಂಡ್‌ ರಿಸೋರ್ಸ್ ಕಂಪನಿ ನಡುವೆ ಹಣಕಾಸು ವ್ಯವಹಾರ ಇತ್ತು. 2013ರಿಂದ ಹಣಕಾಸು ವಿವಾದ ಉಂಟಾಗಿದ್ದು, ಒಟ್ಟು 2.53 ಕೋಟಿ ರು. ಪಾವತಿಸಬೇಕಿತ್ತು. ಒಂದು ಕೋಟಿ ರು. ಚೆಕ್‌ ನೀಡಲಾಗಿತ್ತು. ಆದರೆ, 2022 ರಲ್ಲಿ ಚೆಕ್‌ಬೌನ್ಸ್‌ ಆಗಿರುವ ಸಂಬಂಧ ವಿಎಸ್ಎಲ್ ಸ್ಟೀಲ್ಸ್ ಸಂಸ್ಥೆಯು ಪ್ರಕರಣ ದಾಖಳಿಸಿತ್ತು.

ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ತೀರ್ಪು ಹೊರಡಿಸಿದೆ.  ಇದರಲ್ಲಿ 10 ಸಾವಿರ ರು. ಸರ್ಕಾರಕ್ಕೆ ಉಳಿದ ಹಣ ದೂರುದಾರ ಕಂಪನಿಗೆ ಪಾವತಿಸಬೇಕು ಎಂದು ತಿಳಿಸಿದೆ. ದಂಡ ಪಾವತಿಸುವಲ್ಲಿ ತಪ್ಪಿದರೆ ಒಂದು ವರ್ಷ ಸೆರೆವಾಸದ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.

ಈ ಸಂಬಂಧ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡು ರಾಜ್ಯದ ಎಸ್‌ಐಟಿ, ಸಿಐಡಿ ನಾಗೇಂದ್ರ ಅವರನ್ನು ಬಿಟ್ಟರೂ ನ್ಯಾಯಾಲಯ ಬಿಡುವುದಿಲ್ಲ ಎಂದು ವ್ಯಂಗ್ಯ ಮಾಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ