ಹಿಂದೂಗಳೆನಿಸಿಕೊಂಡವರಿಂದ ಹಿಂಸೆ ಎಂದು ರಾಹುಲ್ ಗಾಂಧಿ ಹೇಳಿದರೆ ಬಿಜೆಪಿಯವರಿಗ್ಯಾಕೆ ಉರಿ ಎಂದ ಸಿದ್ದರಾಮಯ್ಯ

Krishnaveni K

ಮಂಗಳವಾರ, 2 ಜುಲೈ 2024 (13:57 IST)
ಬೆಂಗಳೂರು: ಲೋಕಸಭೆಯಲ್ಲಿ ವಿಪಕ್ಷ ನಾಯಕರ ರಾಹುಲ್ ಗಾಂಧಿ ಹಿಂದೂಗಳೆನಿಸಿಕೊಂಡವರಿಂದ ಹಿಂಸಾಚಾರ ನಡೆಯುತ್ತಿದೆ ಎಂಬ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಹಿಂದೂಗಳು ಎಂದರೆ ಬಿಜೆಪಿ ಯಾಕೆ ಉರಿದುಕೊಳ್ಳಬೇಕು ಎಂದಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂಗಳೆನಿಸಿಕೊಂಡವರಿಂದ ಹಿಂಸಾಚಾರ ನಡೆಯುತ್ತಿದೆ. ನೀವು ನಿಜವಾದ ಹಿಂದೂಗಳೇ ಅಲ್ಲ ಎಂದು ಬಿಜೆಪಿ ಸಂಸದರತ್ತ ಕೈ ತೋರಿಸಿ ಹೇಳಿದ್ದರು. ಜೊತೆಗೆ ಶಿವ, ಜೀಸಸ್, ಗುರು ನಾನಕ್ ಸೇರಿದಂತೆ ಎಲ್ಲಾ ಧರ್ಮಗಳ ದೇವರ ಫೋಟೋ ತೋರಿಸಿ ಟೀಕಾ ಪ್ರಹಾರ ನಡೆಸಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ತಕ್ಷಣವೇ ಎದ್ದು ನಿಂತಿದ್ದ ಪ್ರಧಾನಿ ಮೋದಿ, ಇದು ಗಂಭೀರವಾದ ವಿಷಯ. ವಿರೋಧ ಪಕ್ಷದ ನಾಯಕರು ಹಿಂದೂಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೇ ರಾಹುಲ್ ತಾನು ಹೇಳಿದ್ದು ಹಿಂದೂಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿಯವರಿಗೆ ಎಂದಿದ್ದರು.

ಇದೀಗ ಸಿಎಂ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಭಯಪಡಬೇಡಿ, ಭಯಗೊಳಿಸಬೇಡಿ ಎಂದು ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳೂ ಹೇಳಿವೆ. ಆದರೆ ಬಿಜೆಪಿಯಲ್ಲಿ ಹಿಂದೂಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು’ ಹೀಗೆಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿಯವರೇಕೆ ಉರಿದುಬೀಳಬೇಕು? ನರೇಂದ್ರ ಮೋದಿಯವರಿಗೆ, ಆರ್ ಎಸ್ಎಸ್ ನವರಿಗೆ ಹೇಳಿದರೆ ಅದು ಇಡೀ ಹಿಂದೂ ಸಮುದಾಯಕ್ಕೆ ಹೇಳಿದ ಹಾಗಾಗುತ್ತದಾ? ಇಂದು ಸಂಸತ್ತಿನಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿವಯರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವ್ಯಾಟ್ಸಪ್ ನಲ್ಲಿ ಬಿಜೆಪಿ ಕೃಪಾಪೋಷಿತ ಫೇಕ್ ನ್ಯೂಸ್ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ಶೇರ್ ಮಾಡದಿರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ