ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಗಳಿಗೆ ಡಿಮ್ಯಾಂಡ್
ಸಿಲಿಕಾನ್ ಸಿಟಿ ಕಡೆಗೆ ಖಾಸಗಿ ಕಂಪನಿಯ ಉದ್ಯೋಗಿಗಳು ಮುಖ ಮಾಡುತ್ತಿದ್ದಂತೆ ಬಾಡಿಗೆ ಮನೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನೋ ಟ್ರೆಂಡ್ ಸೃಷ್ಟಿ ಆಗುತ್ತಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ಇಳಿಕೆ ಆಯಿತು ಎಂದುಕೊಂಡಿರುವ ಖಾಸಗಿ ಕಂಪನಿಗಳು ಕಚೇರಿಗೆ ಆಗಮಿಸುವಂತೆ ತಮ್ಮ ಉದ್ಯೋಗಿಗಳಿಗೆ ಬುಲಾವ್ ನೀಡಿವೆ. ಬೆಂಗಳೂರಿನಿಂದ ವಿಮುಖರಾಗಿ ತಮ್ಮ ತಮ್ಮ ಊರುಗಳಿಗೆ ಹೋಗಿದ್ದ ಖಾಸಗಿ ಕಂಪನಿಯ ಉದ್ಯೋಗಿಗಳು ಮತ್ತೆ ರಾಜಧಾನಿ ಕಡೆಗೆ ಹೊರಳುತ್ತಿದ್ದಾರೆ. ಇದನ್ನೇ ಅವಕಾಶವಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗಿರುವ ಮನೆ ಮಾಲೀಕರು ಮನೆ ಬಾಡಿಗೆಯನ್ನು ಏರಿಕೆ ಮಾಡುತ್ತಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಪಿಜಿ ಹಾಗೂ ಸ್ಟೇ ಹೋಮ್ ಬಾಡಿಗೆಯಲ್ಲೂ ಹೆಚ್ಚಳವಾಗುತ್ತಿದೆ. ಇದರಿಂದ ಮದ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತಿದೆ.