ಬೆಂಗಳೂರು: ಕಾವೇರಿ ನೀರು ಪ್ರಾಧಿಕಾರ ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮಗೆ ಹೆಚ್ಚು ಮಳೆ ಬರಲಿ, ತಮಿಳುನಾಡಿಗೆ ನೀರು ಹರಿಯಲಿ ಎಂದು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡುವಾಗ ಡಿಕೆ ಶಿವಕುಮಾರ್ ಹೆಚ್ಚು ಮಳೆ ಬರಲಿ, ಹೆಚ್ಚು ಮಳೆ ಬಂದಷ್ಟು ಒಳ್ಳೆಯದೇ. ಮಳೆಯೂ ಬರಲಿ, ತಮಿಳುನಾಡಿಗೆ ನೀರು ಹರಿಯಲಿ ಎಂದಿದ್ದಾರೆ. ಅವರ ಈ ಹೇಳಿಕೆ ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗುವ ಎಲ್ಲಾ ಸಾಧ‍್ಯತೆಗಳಿವೆ.
ರಾಜ್ಯದಲ್ಲಿ ಇನ್ನೂ ಎಲ್ಲಾ ಕಡೆ ಮಳೆ ಸರಿಯಾಗಿ ಆಗಿಲ್ಲ. ಈಗಲೂ ಹಲವೆಡೆ ನೀರಿನ ಬವಣೆ ತಪ್ಪಿಲ್ಲ. ಇಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಇಂತಹದ್ದೊಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ವಿಪಕ್ಷಗಳು ರಾಜ್ಯದಲ್ಲಿ ನೀರಿನ ಬರ ಎದುರಾಗಲು ತಮಿಳುನಾಡಿಗೆ ರಾಜ್ಯ ಸರ್ಕಾರ ಎಗ್ಗಿಲ್ಲದೇ ನೀರು ಹರಿಸಿರುವುದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದವು.
ಅದರ ನಡುವೆ ಡಿಕೆಶಿ ಇಂತಹದ್ದೊಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಗುರಿಯಾಗಿದೆ. ಇನ್ನು, ಮಳೆ ಹಾನಿ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಟಿ ರೌಂಡ್ಸ್ ಆರಂಭಿಸಿದ್ದಾರೆ. ಈ ಬಾರಿ ಮೇ 31 ರಿಂದಲೇ ಮುಂಗಾರು ಆಗಮನವಾಗಲಿದೆ ಎಂಬ ನಿರೀಕ್ಷೆಯಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಮಳೆಯಾಗಿದೆ.