ದಿ.ಎಸ್.ಬಂಗಾರಪ್ಪನವರ ಶಿಷ್ಯನ ಭೀಕರ ಕೊಲೆ

ಸೋಮವಾರ, 30 ಜುಲೈ 2018 (16:35 IST)
ದಾಂಡೇಲಿ ತಾಲೂಕು ಹೋರಾಟಗಾರ, ವಕೀಲ ಅಜಿತ್ ನಾಯಕ (57) ಅವರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
 

ಪಟ್ಟಣದ ಬಸ್ ನಿಲ್ದಾಣದ ಸಮೀಪದ ಜೆ.ಎನ್‌.ರಸ್ತೆಯಲ್ಲಿರುವ ತಮ್ಮ ಕಛೇರಿಯಿಂದ ಕೆಳಗಿಳಿದು ಬರುವಾಗ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಬಂದು ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ. ಅಜಿತ್ ನಾಯಕ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ದಾಂಡೇಲಿಯನ್ನು ತಾಲೂಕನ್ನಾಗಿಸಲು ನಡೆಸಿದ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು. ನಗರಸಭೆಯ ಮಾಜಿ ಅಧ್ಯಕ್ಷರು, ದಾಂಡೇಲಿ ತಾಲೂಕು ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.  

ಹಿಂದೆ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಮತ್ತು ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಪ್ರೀತಿಯ ಶಿಷ್ಯರಾಗಿ ಅಂದು ಗಮನ ಸೆಳೆದಿದ್ದ ಅವರು, ಅನೇಕ ವರ್ಷಗಳ ಕಾಲ ದಾಂಡೇಲಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು. 2007ನೇ ಸಾಲಿನಲ್ಲಿ ದಾಂಡೇಲಿ ಬಚಾವೋ ಸಮಿತಿಯ ಮೂಲಕ ದಾಂಡೇಲಿ ತಾಲೂಕು ರಚನೆಗಾಗಿ ಅಮೂಲಾಗ್ರ ಹೋರಾಟವನ್ನು ನಡೆಸಿ ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಸಂಚಲನ ಮೂಡಿಸಿದ್ದರು. ನಗರಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರಿಗೆ ಪತ್ನಿ ಭಾರತಿ ಮತ್ತು ಇಬ್ಬರು ಪುತ್ರರಿದ್ದಾರೆ‌.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ