ಹಳೇ ಮೈಸೂರು ಅಖಾಡಕ್ಕೆ ಮಾಜಿ‌ ಪ್ರಧಾನಿ ದೇವೇಗೌಡ್ರು ಎಂಟ್ರಿ..!

ಗುರುವಾರ, 16 ಮಾರ್ಚ್ 2023 (15:55 IST)
ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ನೀಡೊದಕ್ಕ ದಳಪತಿಗಳ ಸಿದ್ದತೆ ಜೋರಾಗಿದೆ.  ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನ ರಾಜ್ಯದಲ್ಲಿ ಸ್ವತಂತ್ರವಾಗಿ  ಅಧಿಕಾರಕ್ಕೆ ತರಬೇಕಂತಾ ದೊಡ್ಡಗೌಡ್ರು ಚುನಾವಣಾ  ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಬ್ಬರ ಅದ್ರಲ್ಲೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರಾದ ಅಮಿತ್ ಶಾ   ಈಗಾಗಲೇ ರಣತಂತ್ರ ಹೆಣೆದಿದ್ದಾರೆ.ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ದಾಳಗಳು ಸಾಕಷ್ಟು ಪ್ರಯೋಗವಾಗ್ತಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪಣತೊಟ್ಟಿದ್ದಾರೆ. ಮತ್ತೊಂದು ಕಡೆ ಆಢಳಿತ ಪಕ್ಷದ ನಾಯಕರು ಮತ್ತೆ ನಾವೆ ಅಧಿಕಾರದ ಗದ್ದುಗೆ ಹಿಡಿಬೇಕಂತಾ ಚದುರಂಗದಾಟಕ್ಕೆ ಮುಂದಾಗಿದ್ದಾರೆ.  ಗೆಲ್ಲುವ ಕ್ಷೇತ್ರಗಳು ಸಮುದಾಯದ ಸೆಳೆತಕ್ಕೆ ಬಿಜೆಪಿ ಚುನಾವಣೆ ಚಾಣಾಕ್ಷ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ ಮುಂದಾಗಿದ್ದಾರೆ. ಅದ್ರಲ್ಲೂ ಜೆಡಿಎಸ್ ಭದ್ರಕೋಟೆ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರಿಸಬೇಕಂತಾ ನಾನಾ ಕಸರತ್ತು ಮಾಡ್ತಿದ್ದಾರೆ. ಮತ್ತೊಂದು ಕಡೆ ಪ್ರದಾನಿ ಮೋದಿ ರೋಡ್ ಶೊ ಮಾಡುವುದರ ಮೂಲಕ ಇಡೀ ಮಂಡ್ಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಕೇಸರಿ ಪಡೆಯ ನಾಯಕರ ಚದುರಂಗದಾಟಕ್ಕೆ ದಳಪತಿಗಳು ಕೂಡ ಸೂತ್ರ ರಚನೆ ಮಾಡಿ‌ ವೇದಿಕೆ ಸಿದ್ದ ಮಾಡ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪ್ರಭುತ್ವ ಸಾಧಿಸೋದಕ್ಕೆ ತಮ್ಮ ರಾಜಕೀಯ ಅನುಭವವನ್ನೇ ದಾಳವನ್ನಾಗಿ ಬಿಡಲು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ್ರು ಅಖಾಡಕ್ಕಿಳಿಯುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಭದ್ರಗೊಳಿಸಿ, ಒಕ್ಕಲಿಗ ಸಮುದಾಯ ಮತ್ತು ಹಳೇ ಮೈಸೂರು ಭಾಗದಲ್ಲಿ ಕಣ್ಣಿಟ್ಟಿದ್ದ ಬಿಜೆಪಿ ತಂತ್ರಕ್ಕೆ  ದಳಪತಿಗಳು ಠಕ್ಕರ್ ನೀಡೊದಕ್ಕೆ ಸಿದ್ದರಾಗಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ರೋಡ್ ಶೊ ಮಾಡಿ ಚಾಪು‌ ಮೂಡಿಸಿರುವ ಪ್ರಧಾನಿ ಮೋದಿ ತಂತ್ರಕ್ಕೆ ಪ್ರತಿತಂತ್ರ ದೊಡ್ಡಗೌಡ್ರ ನೇತೃತ್ವದಲ್ಲಿ ಸುಮಾರು ೧೦೦ ಕಿಮಿ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.

ಮಾರ್ಚ್ 26 ರಂದು ಕುಂಬಳಗೂಡಿನಿಂದ ಮೈಸೂರಿನವರೆಗೂ ದೇವೇಗೌಡ್ರ ರೋಡ್ ಶೋ ನಡೆಸಿ ಮೈಸೂರಿನಲ್ಲಿ ನಡೆಯುವ ಪಂಚರತ್ನ ರಥಯಾತ್ರೆ ಸಮಾರೋಪದಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರು ಭಾಗಿಯಾಗಲಿದ್ದಾರೆ.ಮಾಜಿ ಪ್ರಧಾನಿಗಳ ರೋಡ್ ಶೋ  ಹಾದು ಹೋಗಲಿರುವ ಪ್ರತಿ ಕ್ಷೇತ್ರದಲ್ಲಿ ಜವಾಬ್ದಾರಿ ತೆಗೆದುಕೊಂಡಿರುವ ಸ್ಥಳೀಯ ನಾಯಕರು ಮತ್ತು ಜಿಲ್ಲಾಧ್ಯಕ್ಷರು ರೋಡ್ ಶೋ ಯಶಸ್ವಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ ಜೆಡಿಎಸ್ ನಾಯಕರು.

ಮಾಜಿ ಪ್ರಧಾನಿ ದೇವೆಗೌಡರ ರೋಡ್ ಶೋ ಹಿಂದಿರುವ ರಾಜಕೀಯ ಲೆಕ್ಕಾಚಾರಗಳನ್ನ ನೋಡೊದಾದ್ರೆ, ಹಳೇಮೈಸೂರು ಭಾಗದಲ್ಲಿ ಮತ್ತಷ್ಟು ಬಿಗಿಹಿಡಿತ,  ಕಾಂಗ್ರೆಸ್, ಬಿಜೆಪಿ ಕಣ್ಣಿಟ್ಟಿರುವ ಭಾಗವನ್ನು ಮತ್ತಷ್ಟು ಭದ್ರಗೊಳಿಸುವುದು. ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಚುನಾವಣಾ ತಂತ್ರವಾಗಿ ಬಳಸಿಕೊಳ್ಳುವುದಕ್ಕೆ ಬ್ರೇಕ್ ಹಾಕುವುದು ಸೇರಿದಂತೆ ರೋಡ್ ಶೋ ಹಾದು ಹೋಗುವ ಕಡೆ ದೇವೇಗೌಡರ ಆಢಳಿತದಲ್ಲಿ ಹಾಗೂ  ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳ ಬಗ್ಗೆ ಪ್ರಚಾರ ಮಾಡಿರುವುದು ಸೇರಿದಂತೆ ಹಲವು ವಿಚಾರಗಳನ್ನ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಭರ್ಜರಿಯಾಗಿ ವಾಗ್ದಾಳಿ ನಡೆಸೋದು ದಳಪತಿಗಳ ಮಾಸ್ಟರ್ ಪ್ಲಾನ್ ಆಗಿದೆ.ಒಟ್ನಲ್ಲಿ ದಳಪತಿಗಳ ರೋಡ್ ಶೋ ಮೂಲಕ ಪಂಚರತ್ನ ರಥಯಾತ್ರೆಯನ್ನು ಮತ್ತಷ್ಟು ಪ್ರಚಾರ ಮಾಡುವುದು, ಪಕ್ಷ ಸಂಘಟನೆ, ಅಸಮಧಾನಗಳಿಗೆ ಫುಲ್ ಸ್ಟಾಪ್ ಹಾಕುವುದು ಸೇರಿದಂತೆ ವಿಪಕ್ಷಗಳ ಪ್ಲಾನ್ ಗೆ ಮಾಸ್ಟರ್ ಪ್ಲಾನ್ ರೂಪಿಸುವಲ್ಲಿ ಜೆಡಿಎಸ್ ನಾಯಕರು ಯಶಸ್ವಿಯಗ್ತಾರಾ ಹಳೇ ಮೈಸೂರು ಭಾಗದಲ್ಲಿ ಅಂದುಕೊಂಡಂತೆ ಯಶಸ್ವಿಯಾಗಿ ಪ್ರಭುತ್ವ ಮುಂದುವರೆಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ