ಬೆಂಗಳೂರಿನಲ್ಲಿ ಈ ಬಾರಿ ಅದ್ದೂರಿ ಕರಗ ಉತ್ಸವ ನಡೆಯಲಿದೆ, ಇದೇ ಮಾರ್ಚ್ 29ಕ್ಕೆ ಕರಗ ಉತ್ಸವ ಆರಂಭವಾದರೆ ಬರೋಬ್ಬರಿ 11 ದಿನಗಳ ಕಾಲ ಅಂದರೆ ಏಪ್ರಿಲ್ 8ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ.
ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಹೊರಲಿದ್ದಾರೆ. ''ಏಪ್ರಿಲ್ 6 ರಂದು ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ನಡೆಯುತ್ತದೆ. ಅಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ, ಪ್ರತಿದಿನ ಬೆಳಗ್ಗೆ, ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಮಾ.3ರಂದು ಆರತಿ, ಮಾ.4ರಂದು ಹಸಿಕರಗ, ಮಾ.5 ರಂದು ಪೊಂಗಲ್, 6ರಂದು ಕರಗ ಉತ್ಸವ ನಡೆಯಲಿದೆ. ಕರಗದ ನೆಪದಲ್ಲಿಈ ಬಾರಿ ಧರ್ಮರಾಯಸ್ವಾಮಿ ದೇವಸ್ಥಾನ ಬಡಾವಣೆ ಹಾಗೂ ಸುತ್ತಮುತ್ತಲಿನ ರಸ್ತೆಗಳಿಗೂ ಅಭಿವೃದ್ಧಿಯ ಭಾಗ್ಯ ದೊರೆಯಲಿದೆ.
ಕರಗದಲ್ಲಿ ಗಮನ ಸೆಳೆಯುವ ಎರಡು ಪ್ರಮುಖ ಅಂಶಗಳಿವೆ. ಅವೆಂದರೆ, ಮಲ್ಲಿಗೆ ಹೂವು ಮತ್ತು ಮಹಿಳೆಯರಿಗೆ ನೀಡಿರುವ ಪ್ರಾಶಸ್ತ್ಯ. ಕರಗದ ಜತೆ ಅವಿಭಾಜ್ಯ ಸಂಬಂಧ ಹೊಂದಿರುವ ತಿಗಳರು ಪುಷ್ಪಕೃಷಿಯಲ್ಲಿ ಪರಿಣತರು. ಜತೆಗೆ ಚೈತ್ರ ಮಾಸದ ಸಮಯದಲ್ಲೇ ಮಲ್ಲಿಗೆ ಹೆಚ್ಚು ಕಂಡುಬರುತ್ತದೆ. ಈ ದುಂಡು ಮಲ್ಲಿಗೆಯ ಒತ್ತಾದ ದಂಡೆಗಳನ್ನು ವೀರಕುಮಾರರಿಗೆ ಮುಡಿಯಿಂದ ಹಾಕಲಾಗುತ್ತದೆ. ಜತೆಗೆ ದೇವಾನುದೇವತೆಗಳಿಗೂ ಮಲ್ಲಿಗೆಯನ್ನು ಬಿಟ್ಟು ಬೇರೆ ಹೂವುಗಳನ್ನು ಕರಗದಲ್ಲಿ ಬಳಸುವುದಿಲ್ಲ. ಇನ್ನು, ಇದು ಶಾಕ್ತಪಂಥದ ಆರಾಧನಾ ಕ್ರಮವಾದ್ದರಿಂದ ಶಕ್ತಿ ಸ್ವರೂಪಿಣಿಯಾದ ಸ್ತ್ರೀಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಕರಗದ 11 ದಿನಗಳ ಕಾಲವೂ ಅರ್ಪಿಸಲಾಗುವ ಗಾವನ್ನ, ಪೊಂಗಲ್, ನೈವೇದ್ಯ ಇತ್ಯಾದಿಗಳನ್ನೆಲ್ಲವಹ್ನಿಕುಲ ಸಮುದಾಯದ ಹೆಂಗಳೆಯರೇ ಶ್ರದ್ಧೆಯಿಂದ ಸಿದ್ಧಪಡಿಸುತ್ತಾರೆ.