ಯಾದಗಿರಿಯ ಮೋಟ್ನಳ್ಳಿ ಗ್ರಾಮದಲ್ಲಿ ಮಳೆಗೆ ನಾಲ್ಕೈದು ಮನೆಗಳು ಕುಸಿದಿವೆ. ಕೆಲ ಮನೆಗಳು ಭಾಗಶಃ ಹಾನಿಯಾಗಿವೆ. ಹೊಲಗಳಿಗೆ ಮಳೆ ನೀರು ನುಗ್ಗಿ ಭತ್ತ, ಹತ್ತಿ, ಶೇಂಗಾ ಬೆಳೆಗಳು ನಾಶವಾಗಿವೆ.
ಭಾನುವಾರ ಕಲಬುರಗಿ ಮಹಾನಗರ ಸೇರಿದಂತೆ ತಾಲೂಕಿನ ವಿವಿಧೆಡೆ ವರುಣ ಆರ್ಭರ್ ಮುಂದುವರಿದಿದೆ. ನಗರದ ಬ್ರಹ್ಮಪುರ, ಲಾಳಗೇರಿ ಕ್ರಾಸ್, ಸೋನಿಯಾ ಗಾಂಧಿ ಕಾಲೊನಿ, ಶಾಂತಿನಗರ, ಪ್ರಶಾಂತ ನಗರ, ವೆಂಕಟೇಶ್ವರ ನಗರ, ಎಸ್.ಬಿ. ಟೆಂಪಲ್, ಗುಲಾಬವಾಡಿ, ಎಪಿಎಂಸಿ ಪ್ರದೇಶ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಚರಂಡಿಗಳು ತುಂಬಿಕೊಂಡು ಕೊಚ್ಚೆ ಸಮೇತ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯಿತು.
ಎರಡು ದಿನ ಭಾರೀ ಮಳೆ:
ಸೋಮವಾರ ಮತ್ತು ಮಂಗಳವಾರ ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಮೈಸೂರು, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಡ ದಾವಣಗೆರೆ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.