ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಾಗೇಂದ್ರ ನಾನೇನೂ ಮಾಡಿಲ್ಲ, ಆದ್ರೂ ಕರ್ಕೊಂಡು ಬಂದಿದ್ದಾರೆ ಎಂದಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಪ್ರಮುಖವಾಗಿ ನಾಗೇಂದ್ರ ಮತ್ತು ಆಪ್ತರ ಹೆಸರು ಕೇಳಿಬಂದಿದೆ. ತಾವು ಸಚಿವರಾಗಿದ್ದಾಗ ತಮ್ಮ ಆಪ್ತರ ಮೂಲಕ ನಾಗೇಂದ್ರ ಕೋಟಿಗಟ್ಟಲೆ ಹಣ ಬೇರೆ ಬೇರೆ ರೂಪದಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ನಡುವೆ ಅಕ್ರಮ ಹಣ ವರ್ಗಾವಣೆ ವಿಚಾರವಾಗಿರುವುದರಿಂದ ಇಡಿ ಕಣಕ್ಕಿಳಿದಿದೆ. ಬುಧವಾರ ನಾಗೇಂದ್ರ ನಿವಾಸಕ್ಕೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ ಅವರನ್ನು ವಶಕ್ಕೆ ಪಡೆದುಕೊಂಡಿತು.
ಇಡಿ ಅಧಿಕಾರಿಗಳು ವಶದಲ್ಲಿರುವಾಗ ಮಾಧ್ಯಮಗಳು ಪ್ರಕರಣದ ಬಗ್ಗೆ ಕೇಳಿದಾಗ ನನಗೇನೂ ಗೊತ್ತಿಲ್ಲ, ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಹಾಗಿದ್ದರೂ ಇಡಿ ಅಧಿಕಾರಿಗಳನ್ನು ನನ್ನನ್ನು ಕರೆದುಕೊಂಡು ಬಂದಿದ್ದಾರೆ ಎಂದಿದ್ದಾರೆ. ಅಕ್ರಮದ ಬಗ್ಗೆ ಇಷ್ಟೊಂದು ಸಾಕ್ಷ್ಯ ಸಿಕ್ಕಿರುವಾಗಲೂ ಇಂತಹ ಹೇಳಿಕೆ ನೀಡಿರುವ ಮಾಜಿ ಸಚಿವರ ಭಂಡತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.