ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ವಿಚಾರವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕರ್ನಾಟಕ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೆ ಈಗ ಜೀವ ಭಯ ಕಾಡಿದೆಯಾ? ಇದಕ್ಕೆ ಕಾರಣ ರಾಜ್ಯಪಾಲರಿಗೆ ಈಗ ಭದ್ರತೆ ಹೆಚ್ಚಿಸಿರುವುದು ಕಾರಣವಾಗಿದೆ.
ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೆ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಮುಂದೊಂದು ದಿನ ಬಾಂಗ್ಲಾದೇಶದಲ್ಲಾದ ಗತಿಯೇ ಕರ್ನಾಟಕದ ರಾಜ್ಯಪಾಲರಿಗೂ ಆಗುತ್ತದೆ ಎಂದು ಐವಾನ್ ಡಿಸೋಜರಂತಹ ನಾಯಕರು ಬಹಿರಂಗವಾಗಿಯೇ ಎಚ್ಚರಿಕೆ ವಹಿಸಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯಪಾಲರಿಗೆ ಭದ್ರತೆ ಹೆಚ್ಚಿಸಲಾಗಿದೆ. ರಾಜ್ಯಪಾಲರಿಗೆ ಈಗ ಬುಲೆಟ್ ಪ್ರೂಫ್ ಕಾರು ಒದಗಿಸಲಾಗಿದೆ. ಈಗಾಗಲೇ ರಾಜ್ಯಪಾಲರಿಗೆ ಝಡ್ ಪ್ಲಸ್ ಭದ್ರತೆಯಿದೆ. ಈಗ ರಾಜ್ಯಪಾಲರ ಭದ್ರತೆಗೆ 40 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲರ ಮೇಲೆ ಆಕ್ರೋಶ ಹೆಚ್ಚಾಗಿದೆ. ಆಗಸ್ಟ್ 29 ರವರೆಗೂ ರಾಜ್ಯಪಾಲರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಇರಲು ನಿರ್ಧರಿಸಿದ್ದಾರೆ. ರಾಜ್ಯಪಾಲರು ಭಾಗಿಯಾಗುವ ಕಾರ್ಯಕ್ರಮದಲ್ಲಿ ದಾಂಧಲೆ ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.