ಗಲ್ಲು ಶಿಕ್ಷೆ ರದ್ದು… ಸಾಯುವವರೆಗೆ ಸೈನೈಡ್ ಮೋಹನ್ ಗೆ ಜೈಲೇ ಗಟ್ಟಿ
ಶುಕ್ರವಾರ, 13 ಅಕ್ಟೋಬರ್ 2017 (10:26 IST)
ಬೆಂಗಳೂರು: ಸೈನೈಡ್ ಕಿಲ್ಲರ್, ಅಪರಾಧಿ ಸೈನೈಡ್ ಮೋಹನ್ ಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು ಪಡಿಸಿರುವ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
2009ರಲ್ಲಿ ಮದುವೆಯಾಗುವುದಾಗಿ ನಂಬಿಸಿ ಬಂಟ್ವಾಳ ತಾಲೂಕಿನ ಕೋಳಿಮನೆ ಗ್ರಾಮದ ಅನಿತಾ ಎಂಬಾಕೆಯನ್ನು ಹಾಸನಕ್ಕೆ ಕರೆತಂದು ಆಕೆಯ ಮೇಲೆ ಮೋಹನ್ ಅತ್ಯಾಚಾರವೆಸಗಿದ್ದ. ಆಕೆಯನ್ನು ಹಾಸನದ ಬಸ್ ನಿಲ್ದಾಣಕ್ಕೆ ಕರೆತಂದು, ಗರ್ಭಿಣಿ ಆಗುವುದನ್ನು ತಪ್ಪಿಸಲು ಆಕೆಗೆ ಮಾತ್ರೆ ನೀಡಿದ್ದ. ಈ ಮಾತ್ರೆ ಸೈನೈಡ್ ಲೇಪಿತವಾಗಿತ್ತು. ಇದನ್ನು ಸೇವಿಸಿದ್ದ ಅನಿತಾ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸತ್ತು ಬಿದ್ದಿದ್ದಳು.
2003 ರಿಂದ 2009ರವರೆಗೆ ಸೈನೈಡ್ ಮೋಹನ್ ಇದೇ ರೀತಿ 20ಕ್ಕೂ ಹೆಚ್ಚು ಕೃತ್ಯಗಳನ್ನು ಮಾಡಿದ್ದು, ಸರಣಿ ಹಂತಕ ಸೈನೈಡ್ ಮೋಹನ್ ಗೆ 4 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಇನ್ನು ಅನಿತಾ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಪ್ರಶ್ನಿಸಿ ಮೋಹನ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ಪ್ರಾಸಿಕ್ಯೂಷನ್ ಆತನಿಗೆ ಗಲ್ಲು ಶಿಕ್ಷೆಗೆ ಒತ್ತಾಯಿಸಿತ್ತು.
ಹೈಕೋರ್ಟ್ ವಿಭಾಗೀಯ ಪೀಠವು, ಗಲ್ಲು ಶಿಕ್ಷೆಯನ್ನು ಪರಿಷ್ಕರಿಸಿ, ಆತ ಸಾಯುವವರೆಗೂ ಜೈಲಿನಿಂದ ಬಿಡುಗಡೆ ಮಾಡದಂತೆ ಕಾರಾಗೃಹ ಅಧಿಕಾರಿಗಳಿಗೆ ಆದೇಶ ನೀಡಿದೆ.