ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಲೈಸೆನ್ಸ್ ರದ್ದು : ಸಚಿವ ಡಾ. ಜಿ ಪರಮೇಶ್ವರ್

ಬುಧವಾರ, 24 ಮೇ 2023 (17:01 IST)
ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು ಹಾಗೂ ಹೆಚ್ ಎ ಎಲ್ ಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಅವರ ಲೈಸೆನ್ಸ್ ಅನ್ನು ರದ್ದು ಮಾಡುತ್ತೇವೆ ಎಂದು ನೂತನ ಸಚಿವ ಡಾ.‌ ಜಿ. ಪರಮೇಶ್ವರ್ ತಿಳಿಸಿದ್ದಾರೆ.
 
ತುಮಕೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಬಂದಿದ್ದು, ಈ ಕುರಿತಂತೆ ಚಿಂತನೆ ನಡೆಸಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 
ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ, ಅಲ್ಲದೆ ಸ್ಥಳೀಯ ಯುವಕರು ಉದ್ಯೋಗ ದೊರೆಯುತ್ತಿಲ್ಲ ಎಂಬ ಆತಂಕ ಪಡಬಾರದು  ಎಂಬ  ಭರವಸೆಯನ್ನು ಕೂಡ ನೀಡಿದರು.
 
ನಾನು ಯುವಕನಾಗಿದ್ದಾಗ ತುಮಕೂರು ನಗರದ ಜೂನಿಯರ್ ಕಾಲೇಜು ಗ್ರೌಂಡ್ ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅಭ್ಯಾಸ ಮಾಡುತ್ತಿದ್ದೆ. ಅಲ್ಲಿಂದ ನಾನು ಬೆಂಗಳೂರಿಗೆ ಹೋದೆ. ನಂತರ ಬೆಂಗಳೂರಿನಿಂದ ಆಸ್ಟ್ರೇಲಿಯಕ್ಕೆ ಹೋದೆ. ಆ ನಂತರ ವಾಪಸ್ ನಾನು ನನ್ನ ಊರು ತುಮಕೂರಿಗೆ ಬಂದು ಸೇರಿದ್ದೇನೆ.  ಎಲ್ಲೆಲ್ಲೂ ಹೋಗಿ ಬಂದಿದ್ದೇನೆ. ಏನು ಮಾಡಲು ಆಗಲಿಲ್ಲ, ಹಾಗಾಗಿ ವಾಪಸ್ ತುಮಕೂರು ಹೊರವಲಯದ ಗೊಲ್ಲಹಳ್ಳಿಗೆ ಬಂದು ಸೇರಿದ್ದೇನೆ ಎಂದು ಹೇಳಿದರು.
 
ಈ ಮೂಲಕ ತುಮಕೂರು ಜನರ ಪ್ರೀತಿ ವಿಶ್ವಾಸವನ್ನು ನಾನು ಕಳೆದುಕೊಳ್ಳಲು ಇಷ್ಟಪಡಲಿಲ್ಲ ಎಂದು ಹೇಳಿದರು.ರಾಜ್ಯದ ವಿವಿದೆಡೆ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದರು. ಆದರೆ ನನಗೆ ನನ್ನ ಊರನ್ನು ಬಿಟ್ಟು ಹೋಗಲು ಮನಸ್ಸು ಬರಲಿಲ್ಲ ಹೀಗಾಗಿ ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ ಎಂದು ಹೇಳಿದರು.
ನಾನು ಬೆಳೆದು ಬಂದಂತಹ ಊರು ಗೆಲ್ಲಲಿ, ಸೋಲಲಿ ಇಲ್ಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ