ಪರಿವರ್ತನಾ ಯಾತ್ರೆ ವಿಫಲಕ್ಕೆ ಅಶೋಕ್ ಕಾರಣ: ವರದಿ ಕೇಳಿದ ಅಮಿತ್ ಷಾ
ಸೋಮವಾರ, 6 ನವೆಂಬರ್ 2017 (19:54 IST)
ಬೆಂಗಳೂರು: ಬಿಜೆಪಿಯ ಮಹತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಕಾರಣ ಎಂದು ನೇರವಾಗಿ ಆರೋಪ ಕೇಳಿಬಂದಿದೆ.
ಸಮಾವೇಶದ ಸಂಚಾಲಕರಾಗಿದ್ದ ಅಶೋಕ್ ಸೂಕ್ತವಾಗಿ ಕಾರ್ಯಕ್ರಮವನ್ನು ನಿರ್ವಹಿಸದಿರುವುದು ಗೊಂದಲಕ್ಕೆ ಕಾರಣ ಎಂದು ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಬಲ ಒಕ್ಕಲಿಗ ನಾಯಕ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾಗೆ ದೂರು ಕೊಟ್ಟಿದ್ದಾರೆ.
ಕಾರ್ಯಕ್ರಮಕ್ಕೆ ಬರೋಬ್ಬರಿ 3 ಲಕ್ಷ ಮಂದಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿತ್ತು. 14 ಜಿಲ್ಲೆಗಳ ಪ್ರತಿ ಬೂತ್ ನಿಂದ ತಲಾ ಮೂರು ಬೈಕ್ ನಲ್ಲಿ ಆರು ಜನ ಆಗಮಿಸುವಂತೆ ಯೋಜನೆ ರೂಪಿಸಲಾಗಿತ್ತು. ಎಲ್ಲ ಸವಾರರ ಹೆಸರು, ದೂರವಾಣಿ ಸಂಖ್ಯೆ ಪಟ್ಟಿ ಮಾಡಿ ಪ್ರಕಟಿಸಲಾಗಿತ್ತು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಆರ್.ಅಶೋಕ್ ಅವರಿಗೆ ವಹಿಸಲಾಗಿತ್ತು. ಆದರೆ, ಪಕ್ಷದ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಆಗಮಿಸುವ ವೇಳೆಗೆ ಕಾರ್ಯಕ್ರಮದಲ್ಲಿ ಅರ್ಧದಷ್ಟು ಮೈದಾನ ಖಾಲಿ ಖಾಲಿಯಾಗಿತ್ತು. ಇದರಿಂದ ಭಾರೀ ಮುಜುಗರ ಎದುರಿಸಬೇಕಾಗಿ ಬಂತು.
ಪರಿವರ್ತನಾ ಯಾತ್ರೆಗೆಂದೇ ಭಾರೀ ಕಾರ್ಯತಂತ್ರದ ಹೊರತಾಗಿಯೂ ಉದ್ಘಾಟನೆ ಸಮಾವೇಶದಲ್ಲಿ ಜನ ಪಾಲ್ಗೊಳ್ಳದಿರುವ ಬಗ್ಗೆ ಅಮಿತ್ ಷಾ ರಾಜ್ಯ ಘಟಕದಿಂದ ವರದಿ ಕೇಳಿದ್ದಾರೆ. ಪಕ್ಷದ ತಯಾರಿ ಹೇಗಿತ್ತು, ಅವ್ಯವಸ್ಥೆಗೆ ಕಾರಣವೇನು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಮುಂದಿನ ಸಮಾವೇಶಗಳಲ್ಲಿ ಈ ಎಡವಟ್ಟು ಮರುಕಳಿಸದಂತೆ ಎಚ್ಚರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.