ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಬೇಕಾ? ಬೇಕಿದ್ದರೆ ಮೆಸೇಜ್ ಮಾಡಿ, ದುಡ್ಡು ಕೊಟ್ಟು ವಿಡಿಯೋ ಪಡೆದುಕೊಳ್ಳಿ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್ ಮಾಡಿರುವುದು ವೈರಲ್ ಆಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ವಿಡಿಯೋಗಳನ್ನು ಹಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾರಾಟ ಮಾಡುವ ದಂಧೆ ಶುರುವಾಗಿದೆ ಎಂಬುದು ಇದರಿಂದ ಖಾತ್ರಿಯಾಗಿದೆ.
ರೌಡಿ ಎಡಿಟ್ ಎಂಬ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹದ್ದೊಂದು ಪೋಸ್ಟ್ ಮಾಡಲಾಗಿದೆ. ಈ ವ್ಯಕ್ತಿಯ ಪ್ರೊಫೈಲ್ ನಲ್ಲಿ ವಿಡಿಯೋ ಎಡಿಟರ್ ಎಂದು ಬರೆದುಕೊಳ್ಳಲಾಗಿದೆ.
ಪ್ರಜ್ವಲ್ ರೇವಣ್ಣ ವಿಡಿಯೋ ಇದೆ. ಬೇಕಿದ್ರೆ ಮೆಸೇಜ್ ಮಾಡಿ ಎಂದು ಬರೆಯಲಾಗಿದೆ. ವಿಡಿಯೋ ಕಳುಹಿಸಬೇಕಾದರೆ ಹಣ ಕಳುಹಿಸಿ ಎಂದು ಕೇಳಲಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎನ್ನುವುದು ಗಂಭೀರ ಪ್ರಕರಣವಾಗಿದ್ದು, ಇದನ್ನಿಟ್ಟುಕೊಂಡು ಯಾರೋ ಹಣ ಗಳಿಸಲು ದಂಧೆಗಿಳಿರಿವುದು ಕಳವಳಕಾರಿ.