ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಸಮಸ್ಯೆ ಎದುರಿಸಿದ್ದೀರಾ? ಹಾಗಿದ್ದರೆ ಇನ್ನು ನಿಮಗೆ ಈ ಸಮಸ್ಯೆಯಾಗದು. ಬಿಎಂಟಿಸಿಯಲ್ಲೂ ಇನ್ನು ಕ್ಯಾಶ್ ಲೆಸ್ ಆಗಿ ಪ್ರಯಾಣಿಸಬಹುದು. ಹೇಗೆ ಅಂತೀರಾ?
ಈಗ ಎಲ್ಲಿ ನೋಡಿದರೂ ಯುಪಿಐ ಪೇಮೆಂಟ್ ಪದ್ಧತಿ ಜನಪ್ರಿಯವಾಗಿದೆ. ತಳ್ಳುಗಾಡಿಗಳಲ್ಲೂ ಕ್ಯೂ ಆರ್ ಕೋಡ್ ಬಳಸಿ ಪೇಮೆಂಟ್ ಮಾಡುವ ವ್ಯವಸ್ಥೆ ಬಂದಿದೆ. ಎಲ್ಲಾ ಕಡೆ ಬಂದ ಮೇಲೆ ಬಸ್ ಗಳಿಗೂ ಬರಬೇಕಲ್ಲವೇ? ಇದೀಗ ಬಿಎಂಟಿಸಿ ಬಸ್ ಗಳಲ್ಲೂ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಪದ್ಧತಿ ಜಾರಿಗೆ ಬಂದಿದೆ. ಇದು ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಲಿದೆ.
ಎಲ್ಲೇ ಹೋದರೂ ಇತ್ತೀಚೆಗಿನ ದಿನಗಳಲ್ಲಿ 10 ರೂ. ಚಿಲ್ಲರೆ ಸಿಗುವುದೂ ಕಷ್ಟವಾಗಿದೆ. ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಗಳಿಗೂ ಇದೇ ತಲೆಬಿಸಿ. 20 ರೂ. ಟಿಕೆಟ್ ಗೆ 100 ರೂ. ಕೊಟ್ಟರೆ ಚಿಲ್ಲರೆ ಕೊಡುವುದು ಹೇಗೆ ಎಂಬ ಚಿಂತೆ. ಹೀಗಾಗಿಯೇ ಈಗ ಕ್ಯು ಆರ್ ಕೋಡ್ ಸ್ಕ್ಯಾನರ್ ನ್ನು ನಿರ್ವಾಹಕರಿಗೆ ನೀಡಲಾಗಿದೆ. ಒಂದು ವೇಳೆ ನೀವು ಕ್ಯಾಶ್ ತಂದಿಲ್ಲ, ಚಿಲ್ಲರೆ ಇಲ್ಲ ಎಂದಾದರೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಬಹುದು.
ಈಗಾಗಲೇ ಹಲವರು ಈ ಪದ್ಧತಿಯ ಪ್ರಯೋಜನ ಪಡೆಯುತ್ತಿದ್ದಾರೆ. ಇದರಿಂದ ಕಂಡಕ್ಟರ್ ಮತ್ತು ಪ್ರಯಾಣಿಕರು ಇಬ್ಬರ ಚಿಲ್ಲರೆ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ. ಈಗಾಗಲೇ ಕೆಲವು ತಿಂಗಳಿನಿಂದ ಯುಪಿಐ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ ಇಟಿಎಂ ಮೆಷಿನ್ ನಲ್ಲಿ ಕ್ಯೂ ಆರ್ ಕೋಡ್ ಜನರೇಟ್ ಮಾಡಲು ತಯಾರಿ ನಡೆಸಿದೆ.