ವೀರಮರಣ ಹೊಂದಿದ ಪೊಲೀಸರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲು ಕ್ರಮ
ಭಾನುವಾರ, 21 ಅಕ್ಟೋಬರ್ 2018 (13:59 IST)
ಕರ್ತವ್ಯದಲ್ಲಿ ವೀರಮರಣ ಹೊಂದಿದ ರಾಜ್ಯ ಮತ್ತು ಕೇಂದ್ರ ಪೊಲೀಸ್ ದಳದ ಸಿಬ್ಬಂದಿ ಮತ್ತು ಅಧಿಕಾರಿಗಳ ಕುಟುಂಬಕ್ಕೆ ಹೆಚ್ಚಿನ ಸಹಾಯ ಮತ್ತು ಆತ್ಮಸ್ಥೈರ್ಯ ತುಂಬುವಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಜರುಗಿಸುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರ್ತವ್ಯ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಕಲಬುರಗಿಯ ಡಿ.ಎ.ಆರ್.ಪೊಲೀಸ್ ಮೈದಾನದಲ್ಲಿರುವ ಪೊಲೀಸ್ ಹುತಾತ್ಮ ಸ್ಮಾರಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಡಿಸಿ ಆರ್. ವೆಂಕಟೇಶ ಕುಮಾರ, ಕರ್ತವ್ಯದ ಸಮಯದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದು ಗೌರವ ಮತ್ತು ಅಭಿಮಾನದ ಸಂಗತಿಯಾಗಿದೆ ಎಂದರು.
ದೇಶದ ರಕ್ಷಣೆಯಲ್ಲಿ ಪೊಲೀಸ್, ಸೇನಾ ಪಡೆ ಹಾಗೂ ಅರೆಸೇನಾ ಪಡೆಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವುದಿಲ್ಲ. ಪೊಲೀಸರು ತಮ್ಮ ಸಂಸಾರದ ಆಗು ಹೋಗುಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಾರೆ. ಸರ್ಕಾರವು ಪೊಲೀಸ್ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚು ಒತ್ತು ನೀಡಿದ್ದು, ಎಲ್ಲ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ಮೂಲಕ ಉತ್ತಮ ಜೀವನ ಸಾಗಿಸುವಲ್ಲಿ ಸಹಾಯ ಮಾಡುತ್ತಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ತೊಂದರೆಗಳು ಕಂಡುಬರುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ 414 ಪೊಲೀಸರು ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಈ ಪೈಕಿ ಕರ್ನಾಟಕದ 15 ಜನರು ಸೇರಿದ್ದಾರೆ ಎಂದರು.