ಔಷಧಗಳ ಬೆಲೆ ಏಪ್ರಿಲ್ ನಿಂದ ಶೇ 10 ರಷ್ಟು ಹೆಚ್ಚಳ

ಭಾನುವಾರ, 27 ಮಾರ್ಚ್ 2022 (19:39 IST)
ನೋವು ನಿವಾರಕ, ಸೋಂಕು ನಿವಾರಕ ಸೇರಿದಂತೆ ಸುಮಾರು 850 ಅಗತ್ಯ ಔಷಧಿಗಳ ದರ ಏಪ್ರಿಲ್‌ 1ರಿಂದ ಶೇ 10.8 ರಷ್ಟು ಏರಿಕೆಯಾಗಲಿದೆ.
 
ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು (ಎನ್‌ಪಿಪಿಎ) ಔಷಧಗಳ ದರ ಏರಿಕೆಗೆ ಅನುಮತಿ ನೀಡಿತ್ತು.
 
ಹೀಗಾಗಿ, ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿ ಬೆಲೆ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಹೆಚ್ಚಾಗಲಿವೆ.
 
ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ, ಅಜಿಥ್ರೊಮೈಸಿನ್, ಹೈಡ್ರೊಕ್ಲೊರೈಡ್, ಪ್ಯಾರಸಿಟಮಾಲ್, ಫೆನೊಬಾರ್ಬಿಟೊನ್‌ ಮತ್ತು ಫೆನಿಟೊಯಿನ್ ಸೋಡಿಯಂನಂತಹ ಔಷಧಗಳೂ ಸೇರಿವೆ.
 
'ಇದು ಅಗತ್ಯ ಔಷಧಗಳ ಗರಿಷ್ಠ ಏರಿಕೆಯಾಗಿದೆ. ಈ ಹೆಚ್ಚಳದಿಂದ ರೋಗಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ' ಎಂದು ಬೆಂಗಳೂರಿನ ಔಷಧ ಮಾರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
 
'ಇದೇ ಮೊದಲ ಬಾರಿಗೆ ಶೇ 10 ರಷ್ಟು ನಾನ್‌ ಶೆಡ್ಯೂಲ್ ಔಷಧಗಳ ದರ ಹೆಚ್ಚಿಸಲಾಗುತ್ತಿದೆ. 2021ರಲ್ಲಿ ಕೇವಲ ಶೇ 0.53 ರಷ್ಟು ದರ ಹೆಚ್ಚಿಸಲಾಗಿತ್ತು. 2020ರಲ್ಲಿ ಶೇ 1.88 ರಷ್ಟು ಏರಿಕೆ ಮಾಡಲಾಗಿತ್ತು' ಎಂದು ಕರ್ನಾಟಕ ಔಷಧ ಉತ್ಪಾದಕರ ಸಂಸ್ಥೆ (ಕೆಡಿಪಿಎಂಎ) ಅಧ್ಯಕ್ಷ ಹರೀಶ್ ಜೈನ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ