ಇನ್ನು ಹತ್ತು ದಿನ ನೋಡಿ ಉಳಿದ ತರಗತಿ ಆರಂಭಿಸಲಾಗುವುದು; ಬೊಮ್ಮಾಯಿ

ಮಂಗಳವಾರ, 24 ಆಗಸ್ಟ್ 2021 (08:46 IST)
ಬೆಂಗಳೂರು (ಆ. 24): ಒಂದೂವರೆ ವರ್ಷಗಳ ಬಳಿಕ ಇಂದು ರಾಜ್ಯದಲ್ಲಿ ಭೌತಿಕ ಶಾಲೆ ಆರಂಭವಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ನಾನು ಮಲ್ಲೇಶ್ವರದ ಶಾಲೆ ಕಾಲೇಜಿಗೆ ಭೇಟಿ ನೀಡಿದ್ದೆ. ಮಕ್ಕಳು ಕೂಡ ಅತ್ಯಂತ ಉತ್ಸುಕರಾಗಿದ್ದಾರೆ. ಆನ್ಲೈನ್ ಕಲಿಕೆಗಿಂತ ಶಾಲೆಗೆ ಬರುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೊದಲ ದಿನ ಶಾಲೆ ಆರಂಭ ಯಶಸ್ಸಿನ ಕುರಿತು ಮಾತನಾಡಿದ ಅವರು, ಈಗ 9ನೇ ತರಗತಿಯಿಂದ ಪಿಯುಸಿವರೆಗೆ ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಅವಕಾಶ ಇದೆ. ಮುಂದಿನ ವಾರ ಅಥವಾ ಹತ್ತು ದಿನಗಳ ಕಾಲ ಪರಿಸ್ಥಿತಿ ಕೋವಿಡ್ ಪರಿಸ್ಥಿತಿ, ವಿದ್ಯಾರ್ಥಿಗಳ ಆರೋಗ್ಯದ ಕುರಿತು ಗಮನಿಸುತ್ತೇವೆ. ಮಕ್ಕಳ ಆರೋಗ್ಯ ನಮಗೆ ಹೆಚ್ಚು ಮುಖ್ಯ. ಈ ಹಿನ್ನಲೆ ಈ ಸಂಬಂಧ ತಜ್ಞರ ಸಮಿತಿಯಿಂದ ಮಾಹಿತಿ ಪಡೆಯುತ್ತೇವೆ. ನಂತರ ಪ್ರಾಥಮಿಕ ಶಾಲೆ ಹಾಗೂ 8 ನೇ ತರಗತಿ ತೆರೆಯುವ ಬಗ್ಗೆ ನಿರ್ಧಾರ ಮಾಡ್ತೇವೆ. ಇದೇ 30ರಂದು ಅಥವಾ ಸೆ. 1 ರಂದು ತಜ್ಞರ ಜೊತೆ ಸಭೆ ನಡೆಸುತ್ತೇವೆ. ಮುಂದಿನ ಕ್ರಮಗಳನ್ನ ಹೇಗೆ ತೆಗೆದುಕೊಳ್ಳಬೇಕೆಂದು ಸಭೆ ನಡೆಸುತ್ತೇವೆ . ಗಡಿ ಜಿಲ್ಲೆಗಳಲ್ಲಿ ಶಾಲೆ ತೆರೆಯುವ ಬಗ್ಗೆ, ತಜ್ಞರ ಸಮಿತಿಯ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ ಎಂದರು.
ಶೇ 25 ರಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರು
ಸರ್ಕಾರದ ಸಕಲ ಭರವಸೆಗಳ ನಡುವೆ ಇಂದು ಶಾಲೆ ಆರಂಭವಾದರೂ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ನಿರಾಸಕ್ತಿ ತೋರಿರುವುದು ಅಂಕಿ ಅಂಶಗಳಲ್ಲಿ ಬಯಲಾಗಿದೆ. ಸರ್ಕಾರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಶಾಲೆ ಆರಂಭಕ್ಕೆ ಹೆಚ್ಚಿನ ಉತ್ಸಾಹ ತೋರಿದೆ. ಆದರೆ, ಈ ಉತ್ಸಾಹ ಪೋಷಕರಲ್ಲಿ ಇಲ್ಲ. ಕೋವಿಡ್ ಭಯದಿಂದ ಶೇ 75ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದು, ಆನ್ಲೈನ್ ತರಗತಿ ಮೊರೆ ಹೋಗಿದ್ದಾರೆ. ಶಾಲೆಗಳಲ್ಲಿ ಮೊದಲ ದಿನ ಶೇ.25ರಷ್ಟು ಸಹ ಹಾಜರಾತಿ ಕೂಡ ಕಂಡು ಬಂದಿಲ್ಲ.
ರಾಜ್ಯದಲ್ಲಿ ಒಟ್ಟಾರೆ ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಕೇವಲ ಶೇ.19.56ರಷ್ಟು ವಿದ್ಯಾರ್ಥಿಗಳು ಹಾಜರಾದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.53.58ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 2.23ರಷ್ಟು ಹಾಜರಾತಿ ಕಂಡು ಬಂದಿದೆ.
ಹತ್ತನೇ ತರಗತಿಗೆ ರಾಜ್ಯದಲ್ಲಿ ಒಟ್ಟಾರೆ ಶೇ.21.08ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬಂದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.54.07ರಷ್ಟು ಹಾಜರಾತಿ ಕಂಡು ಬಂದಿದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 2.20ರಷ್ಟು ಹಾಜರಾತಿ ದಾಖಲಾಗಿದೆ.
ದ್ವಿತೀಯ ಪಿಯುಸಿ ಒಟ್ಟು ಶೇ.36ರಷ್ಟು ಮಾತ್ರ ಹಾಜರಾತಿ ಇದೆ. ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ. 64ರಷ್ಟು ಹಾಜರಾತಿ ಕಂಡರೆ, ಬೀದರ್ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ. 08ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ