ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ: ನಾಗೇಂದ್ರ ಪಿಎ ಹರೀಶ್​ ಬಂಧನ

Sampriya

ಬುಧವಾರ, 10 ಜುಲೈ 2024 (14:50 IST)
Photo Courtesy X
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರ ಪಿಎ ಹರೀಶ್‌ನನ್ನು ಬಂಧಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​​ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿರುವ ಬಸನಗೌಡ ದದ್ದಲ್ ನಿವಾಸದ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ನಾಗೇಂದ್ರ ಮನೆ ಮೇಲೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಡಾಲರ್ಸ್​ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್​ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು. ಅಧಿಕಾರಿಗಳಿಂದ ಫ್ಲ್ಯಾಟ್​ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು.

ಬಂಧಿತ ಹರೀಶ್​ ಅವ್ಯವಹಾರದ ವೇಳೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದನು.  ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ್ದಾನೆ. ಹೈದರಾಬಾದ್‌ನ ಆರೋಪಿ ಸತ್ಯನಾರಾಯಣ ವರ್ಮಾನಿಂದ ಬಂದಿದ್ದ ಹಣ ಹರೀಶ್‌ಗೆ ತಲುಪಿತ್ತು. ಪಿಎ ಹರೀಶ್‌ ಏಪ್ರಿಲ್ ತಿಂಗಳಿನ ಎರಡನೇ ವಾರ ಬಿಬಿಎಂಪಿ ಕಚೇರಿಯ ಶ್ರೀನಿಧಿ ಸಾಗರ್ ಹೋಟೆಲ್ ಬಳಿ ಪದ್ಮನಾಭನಿಂದ 25 ಲಕ್ಷ ಹಣ ಪಡೆದಿದ್ದ ಆರೋಪವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ