ಕೊಡಗಿನಲ್ಲಿ ಕಾರ್ಯಕರ್ತರೊಂದಿಗೆ ಎಳನೀರು ಕುಡಿದು, ಊಟ ಸೇವಿಸಿದ ಯದುವೀರ್

Sampriya

ಶುಕ್ರವಾರ, 15 ಮಾರ್ಚ್ 2024 (19:15 IST)
Photo Courtesy Facebook
ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ಪ್ರಚಾರ ಕಾರ್ಯವಾಗಿ ಇಂದು ಕೊಡಗಿನಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರು ರಸ್ತೆ ಬದಿಯಲ್ಲಿ ಎಳನೀರು ಕುಡಿದು, ಕಾರ್ಯಕರ್ತರೊಂದಿಗೆ ಊಟ ಮಾಡಿದರು.
 
ಇದಕ್ಕೂ ಮುನ್ನ ಅವರು ಕುಶಾಲನಗರದ ಕೊಪ್ಪ‍ ಸೇತುವೆ ಬಳಿ ಇರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಮಡಿಕೇರಿಯಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು.
 
ಪತ್ರಕರ್ತರೊಬ್ಬರು 'ರಾಜವಂಶಸ್ಥರು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ' ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಾರ್ವಜನಿಕ ಜೀವನಕ್ಕೆ ಬಂದ್ಮೇಲೆ ಎಲ್ಲರಿಗೂ ಲಭ್ಯರಾಗುವಂತೆ ಇರಬೇಕಾಗುತ್ತದೆ ಎಂದರು. 
 
ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಪ್ರತಾಪಸಿಂಹ ಅವರು ಈಗಾಗಲೇ ಶುಭಾಶಯ ಕೋರಿದ್ದು, ಮುಂಬರುವ ದಿನಗಳಲ್ಲಿ ಅವರೂ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆಂಬ ನಿರೀಕ್ಷೆಯಿದೆ. ಕಳೆದ 10 ವರ್ಷದಲ್ಲಿ ಪ್ರತಾಪ್ ಸಿಂಹ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುವುದಾಗಿ ಹೇಳಿದರು. 
 
ಹಿಂದುಳಿದ ವರ್ಗಗಳ ಮೋರ್ಚಾದ ಸಭೆಯಲ್ಲಿ ಭಾಗಿಯಾದ ಅವರು 'ಪ್ರಕೃತಿಗೆ ಪೂರಕವಾದ ಅಭಿವೃದ್ಧಿ ಯೋಜನೆಗಳನ್ನು ಕೊಡಗಿನಲ್ಲಿ ಜಾರಿಗೆ ತರುವುದಾಗಿ ಭರವಸೆ ನೀಡಿದರು.  ಈ ವೇಳೆ ಯದುವೀರ್ ಅವರ ಜತೆ ಕಾರ್ಯಕರ್ತರು ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ