ಇನ್ಸುಲಿನ್ ಕೊಡದೇ ಕೇಜ್ರಿವಾಲ್ ರನ್ನು ಸಾಯಿಸಲು ಪ್ಲ್ಯಾನ್: ಆಪ್ ಆರೋಪ

Krishnaveni K

ಶುಕ್ರವಾರ, 19 ಏಪ್ರಿಲ್ 2024 (09:30 IST)
ನವದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅತಿಯಾಗಿ ಸಿಹಿ ತಿಂದು ಬೇಕೆಂದೇ ಶುಗರ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬ ಇಡಿ ದೂರಿನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಹೊಸ ಆರೋಪ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಬೇಕೆಂದೇ ಶುಗರ್ ಹೆಚ್ಚುವಂತೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಆಪ್ ಪಕ್ಷದ ನಾಯಕಿ ಅತಿಶಿ ಪ್ರತಿಕ್ರಿಯಿಸಿದ್ದಾರೆ. ದೆಹಲಿ ಸಿಎಂಗೆ ಈಗ ಮಧುಮೇಹ ಬಂದಿರುವುದಲ್ಲ, ಕಳೆದ 30 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದಾರೆ. ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಕ್ಕೆ ಆಪ್ ಪಕ್ಷದ ನಾಯಕಿ ಅತಿಶಿ ತಿರುಗೇಟು ಕೊಟ್ಟಿದ್ದಾರೆ.

‘ದೆಹಲಿ ಸಿಎಂ ಕೇಜ್ರಿವಾಲ್ ಸಿಹಿಯಾದ ಚಹಾ ಸೇವಿಸುತ್ತಾರೆ. ಆದರೆ ಅದು ವೈದ್ಯರ ಸಲಹೆ ಮೇರೆಗೆ ಕಡಿಮೆ ಕ್ಯಾಲೊರಿ ಇರುವ ಸಿಹಿ ಅಂಶವನ್ನು ಸೇರಿಸಿ ಸೇವಿಸುತ್ತಾರೆ. ಶುಗರ್ ಹೆಚ್ಚಿಸಿಕೊಳ್ಳಲು ಕೇಜ್ರಿವಾಲ್ ಪದೇ ಪದೇ ಬಾಳೆಹಣ್ಣು ಸೇವಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿತ್ತು. ಆದರೆ ವೈದ್ಯರೇ ಮಧುಮೇಹಿಗಳು ತುರ್ತು ಸಂದರ್ಭಕ್ಕಾಗಿ ಬಾಳೆಹಣ್ಣು ಇಟ್ಟುಕೊಳ್ಳಬಹುದು ಎನ್ನುತ್ತಾರೆ’ ಎಂದಿದ್ದಾರೆ.

ಇನ್ನು ಕೇಜ್ರಿವಾಲ್ ಪ್ರತಿನಿತ್ಯ ಆಲೂಪೂರಿ ಸೇವಿಸುತ್ತಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅತಿಶಿ, ‘ಕೇಜ್ರಿವಾಲ್ ಅವರು ನವರಾತ್ರಿ ಮೊದಲ ದಿನ ಮಾತ್ರ ಆಲೂಪೂರಿ ಸೇವಿಸಿದ್ದಾರೆ. ಇದು ನವರಾತ್ರಿ ಪದ್ಧತಿ. ಕೇಜ್ರಿವಾಲ್ ಮಧುಮೇಹ ಮಟ್ಟ 300 ದಾಟಿದೆ. ಇದಕ್ಕೆ ಕಾರಣ ತಿಹಾರ್ ಜೈಲು ಅಧಿಕಾರಿಗಳು ಅವರಿಗೆ ಇನ್ಸುಲಿನ್ ನೀಡಿಲ್ಲ. ಕೋರ್ಟ್ ಒಪ್ಪಿಗೆ ಮೇರೆಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಅವರಿಗೆ ಇನ್ಸುಲಿನ್ ನೀಡಲು ಸಲಹೆ ನೀಡಿದ್ದಾರೆ. ಆದರೆ ಜೈಲು ಅಧಿಕಾರಿಗಳು ಅದನ್ನು ನೀಡುತ್ತಿಲ್ಲ. ಮನೆ ಆಹಾರ ನೀಡದೇ, ಇನ್ಸುಲಿನ್ ನೀಡದೇ ಕೇಜ್ರಿವಾಲ್ ರ ಜೀವಕ್ಕೆ ಅಪಾಯ ತರುವ ಪ್ರಯತ್ನ ನಡೆದಿದೆ’ ಎಂದು ಅತಿಶಿ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ