ಮಕ್ಕಳು ಎಂದ ತಕ್ಷಣ ಮುಗ್ಧತೆ, ಖುಷಿ, ತುಂಟಾಟಗಳೇ ನೆನಪಿಗೆ ಬರುತ್ತವೆ. ಇಂದಿನ ಮಕ್ಕಳು ಹಿಂದಿನವರಂತಲ್ಲ. ಹಿಂದಿನ ಮಕ್ಕಳಿಗೆ ಅಪ್ಪ-ಅಮ್ಮ ಎಂದರೆ ಒಂದು ರೀತಿಯ ಭಯ ಮಿಶ್ರಿತ ಪ್ರೀತಿಯಿತ್ತು. ಆದರೆ ಇಂದಿನ ಮಕ್ಕಳು ತಮ್ಮ ತಂದೆ-ತಾಯಿ ಬಳಿ ಒಬ್ಬ ಗೆಳೆಯ/ಗೆಳತಿಯನ್ನು ನೋಡಲು ಬಯಸುತ್ತಾರೆ.
ಆಧುನಿಕ ಜಗತ್ತಿನಲ್ಲಿ, ಕಿರಿದಾದ ಕುಟುಂಬದಲ್ಲಿ ಇದು ಅಗತ್ಯ ಕೂಡಾ. ಮಕ್ಕಳಿಗೂ ತಮ್ಮ ಭಾವನೆ ಹಂಚಿಕೊಳ್ಳಲು ಹೆಚ್ಚು ಜನರ ಒಡನಾಟವಿರುವುದಿಲ್ಲ. ಹೀಗಾಗಿ ಅಪ್ಪ-ಅಮ್ಮನೇ ಗೆಳೆಯರಾಗಬೇಕಾಗುತ್ತದೆ. ಒಂದು ಹಂತವಾದ ಮೇಲೆ ಮಕ್ಕಳು ತಮ್ಮ ಪೋಷಕರಿಂದ ಅತಿಯಾದ ಸಲಹೆಗಳನ್ನು ಕೇಳಲು ಬಯಸುವುದಿಲ್ಲ.
ಮಕ್ಕಳನ್ನು ಗೆಳೆಯರಂತೆ ನೋಡಬೇಕು ಎಂದು ಬಲ್ಲವರು ಹೇಳುತ್ತಾರೆ. ಆದರೆ ನಮ್ಮ ಮಕ್ಕಳು ನಮ್ಮ ಜೊತೆ ಗೆಳೆಯರಾಗಿರಬೇಕಾದರೆ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಬುದ್ಧಿ ಹೇಳುವುದನ್ನು ಬಿಡಬೇಕು. ಅವರು ಹೊರ ಪ್ರಪಂಚವನ್ನು ತಾನಾಗಿಯೇ ಕಲಿಯಲು ಬಿಡಬೇಕು. ಅವರಿಗೆ ಅಗತ್ಯವೆನಿಸಿದರೆ ಮಾತ್ರ ಬುದ್ಧಿವಾದ ಹೇಳಬೇಕು. ತಾವು ದೊಡ್ಡವರು, ತಾನು ಹೇಳಿದಂತೆ ಕೇಳಬೇಕು ಎನ್ನುವ ಹಠ, ಧೋರಣೆಯನ್ನು ಮಕ್ಕಳ ಮೇಲೆ ಹೇರಲು ಹೋದರೆ ಅವರು ಖಂಡಿತಾ ಒಳ್ಳೆಯ ಗೆಳೆಯರಂತೆ ನಿಮ್ಮ ಜೊತೆ ಒಡನಾಟವಿಟ್ಟುಕೊಳ್ಳಲ್ಲ. ನಿಮ್ಮಿಂದ ದೂರ ಹೋಗಲು ಬಯಸುತ್ತಾರೆ.