ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು. ನಿನ್ನೆ ಮೋದಿ ಮಾಡಿದ ಭಾಷಣಕ್ಕೆ ಇಂದು ಖರ್ಗೆ ತಿರುಗೇಟು ನೀಡಿದ್ದಾರೆ.
ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸಂವಿಧಾನವನ್ನು ಹಿಡಿತದಲ್ಲಿಟ್ಟುಕೊಂಡಿತ್ತು. ನೆಹರೂ, ಇಂದಿರಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂದು ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಮೋದಿ ನಂ.1 ಸುಳ್ಳುಗಾರ ಎಂದಿದ್ದಾರೆ. 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದ್ರು. ಎಲ್ಲಿ ಹೋಯ್ತು ಆ ಭರವಸೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಮೋದಿ ತಮ್ಮ ಸುಳ್ಳಿನ ಮೂಲಕ ದೇಶದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸಂವಿಧಾನ ಬಲಪಡಿಸಲು ಮೋದಿ ಏನು ಮಾಡಿದರು ಎಂಬುದನ್ನು ಹೇಳಲಿ ಎಂದಿದ್ದಾರೆ. ಇಂದಿರಾ ಗಾಂಧಿಯವರ ಬಾಂಗ್ಲಾದೇಶಕ್ಕೆ ಸ್ವತಂತ್ರ ಕೊಡಿಸಿದರು. ಈಗ ಅಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಬಿಜೆಪಿ ನಾಯಕರು ಇಂದಿರಾ ಗಾಂಧಿಯವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಲಿ. ಇಂದಿರಾ ನಿಜವಾಗಿಯೂ ಈ ದೇಶದ ಉಕ್ಕಿನ ಮಹಿಳೆ ಎಂದಿದ್ದಾರೆ.
ಇನ್ನು, ನಿರ್ಮಲಾ ಸೀತಾರಾಮನ್ ವಿರುದ್ಧವೂ ವಾಗ್ದಾಳಿ ನಡೆಸಿದ ಖರ್ಗೆ, ನಿರ್ಮಲಾ ಓದಿದ್ದು ಜವಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲೇ ಎಂಬುದು ನೆನಪಿರಲಿ. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ನಾನು ಆಕೆಯಷ್ಟು ಓದಿಲ್ಲದಿರಬಹುದು. ಆಕೆಯಷ್ಟು ಚೆನ್ನಾಗಿ ಹಿಂದಿ, ಇಂಗ್ಲಿಷ್ ಮಾತನಾಡದಿರಬಹುದು. ಆದರೆ ಆಕೆಗೆ ಹಿಂದಿ, ಇಂಗ್ಲಿಷ್ ಎಲ್ಲಾ ಚೆನ್ನಾಗಿ ಗೊತ್ತಿದ್ದರೂ ಉದ್ದೇಶ ಸರಿ ಇಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.