ನವದೆಹಲಿ: ಪಾಕಿಸ್ತಾನದ ಮೇಲೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಏರ್ ಸ್ಟ್ರೈಕ್ ನಡೆಸಿದ ಬಳಿಕ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಮಗೆಲ್ಲಾ ಗೊತ್ತಿರುವ ಹಾಗೆ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ನಡೆಸಿ ಪಾಕಿಸ್ತಾನ ಪ್ರೇರಿತ ಉಗ್ರರು 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಕೊಂದಿದ್ದರು. ಇದರ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿದ್ದರೂ ಪಾಕಿಸ್ತಾನ ಇದರಲ್ಲಿ ತನ್ನ ಪಾತ್ರವಿಲ್ಲ ಎಂದು ನಿರಾಕರಿಸುತ್ತಲೇ ಬಂತು.
ಕಳೆದ 1 ವರ್ಷದಲ್ಲಿ ಕಾಶ್ಮೀರಕ್ಕೆ 2.5 ಕೋಟಿ ಪ್ರವಾಸಿಗರು ಬಂದಿದ್ದರು. ಇದನ್ನು ಸಹಿಸದೇ ಉಗ್ರರು ದಾಳಿ ನಡೆಸಿದರು. ಪಹಲ್ಗಾಮ್ ನಲ್ಲಿ ನಾಗರಿಕರನ್ನು ಗುರಿಯಾಗಿರಿಸಿ ನಡೆಸಿದ ಉಗ್ರರ ದಾಳಿ ಮುಂಬೈ ದಾಳಿ ಬಳಿಕ ನಾಗರಿಕರನ್ನು ಗುರಿಯಾಗಿರಿಸಿ ಮಾಡಿದ ಅತ್ಯಂತ ದೊಡ್ಡ ದಾಳಿಯಾಗಿತ್ತು.
ಉಗ್ರರ ದಾಳಿಯಲ್ಲಿ ಮಡಿದವರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಆಪರೇಷನ್ ಸಿಂದೂರ್ ಮಾಡಿದ್ದೇವೆ. ಪಾಕಿಸ್ತಯಾನದ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿ ಭಾರತೀ ಸೇನೆ ಕ್ಷಿಪ್ರ ದಾಳಿ ನಡೆಸಿದೆ.
ಪಾಕಿಸ್ತಾನ ಉಗ್ರರಿಗೆ ಆಶ್ರಯ, ಹಣ ನೀಡಿದೆ ಎನ್ನುವುದಕ್ಕೆ ಸಾಕ್ಷ್ಯಗಳಿವೆ. ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿದೆ. ಉಗ್ರರನ್ನು ಮಟ್ಟ ಹಾಕುವುದಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ.