ಹೈದರಾಬಾದ್: ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತೆಯೊಬ್ಬರ ಕೂದಲನ್ನು ಎಳೆದಾಡಿದ ಪೊಲೀಸರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ನ ರಾಜೇಂದ್ರ ನಗರ ಕೃಷಿ ವಿವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಬಿವಿಪಿ ಕಾರ್ಯಕರ್ತೆಯಾಗಿರುವ ಮಹಿಳೆಯ ಜೊತೆ ಪೊಲೀಸರು ಈ ಅನುಚಿತ ವರ್ತನೆ ಮಾಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಿಆರ್ ಎಸ್ ನಾಯಕಿ ಕವಿತಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಸ್ಕೂಟಿ ಚಲಾಯಿಸುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದ ಮಹಿಳೆಯನ್ನು ಹಿಂಬಾಲಿಸುತ್ತಾರೆ. ಸ್ಕೂಟಿ ಚಾಲನೆಯಲ್ಲಿರುವಾಗಲೇ ಮಹಿಳೆಯ ಕೂದಲು ಹಿಡಿದುಕೊಳ್ಳುತ್ತಾರೆ. ಈ ವೇಳೆ ಮಹಿಳೆ ಕೆಳಕ್ಕೆ ಬೀಳುತ್ತಾರೆ. ಸ್ಕೂಟಿ ನಿಲ್ಲಿಸುವ ಪೊಲೀಸರು ಮಹಿಳೆಯ ಕೂದಲು ಹಿಡಿದು ಎಳೆದಾಡುತ್ತಾರೆ.
ಈ ದೃಶ್ಯವನ್ನು ಶೇರ್ ಮಾಡಿರುವ ಬಿಆರ್ ಎಸ್ ಪಕ್ಷದ ನಾಯಕಿ ಕೆ ಕವಿತಾ, ತೆಲಂಗಾಣ ಪೊಲೀಸರ ಈ ವರ್ತನೆ ಅಕ್ಷಮ್ಯವಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಈ ಹೇಯ ಕೃತ್ಯಕ್ಕೆ ತೆಲಂಗಾಣ ಪೊಲೀಸರು ಕ್ಷಮೆ ಯಾಚಿಸಬೇಕು. ಅಲ್ಲದೆ ಮಾನವ ಹಕ್ಕುಗಳ ಆಯೋಗವೂ ಪ್ರಕರಣದಲ್ಲಿ ಮಧ‍್ಯಪ್ರವೇಶಿಸಬೇಕು. ಕೃತ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆ ಪುನರಾವರ್ತೆಯಾಗಬಾರದು ಎಂದಿದ್ದಾರೆ.
ತೆಲಂಗಾಣ ಪೊಲೀಸರ ಹೇಳಿಕೆ
ಘಟನೆ ನಮ್ಮ ಗಮನಕ್ಕೂ ಬಂದಿದೆ. ಎಬಿವಿಪಿ ಕಾರ್ಯಕರ್ತರು ವಿವಿಗೆ ಸಂಬಂಧಿಸಿದ ನಿವೇಶನವನ್ನು ಹೈಕೋರ್ಟ್ ಗೆ ಬಿಟ್ಟುಕೊಡುವುದರ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದಾಗ ಕೆಲವರು ಓಡಿ ತಪ್ಪಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಈ ರೀತಿ ಆಗಿದೆ ಎಂದಿದ್ದಾರೆ.