ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಕೆಲವು ಪಾಲನ್ನು ಸರ್ಕಾರ ವಶಪಡಿಸಿಕೊಂಡು ಬಡವರಿಗೆ ಹಂಚಲಿದೆ ಎಂಬ ಪ್ರಣಾಳಿಕೆಯ ವಿವರ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಇದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ 50 ಶೇಕಡಾ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಎಂದಲ್ಲ. ಆದರೆ ಯಾರಿಗೆ ಅನ್ಯಾಯವಾಗುತ್ತಿದೆಯೋ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡೋಣ ಎಂದು ಹೇಳಿದ್ದೇವಷ್ಟೇ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ನ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅಮೆರಿಕಾದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ಮಾತನಾಡುತ್ತಾ ಶೇ.50 ರಷ್ಟು ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ ಸೇರುವಂತಾಗಬೇಕು. ಅದನ್ನು ಬಡವರಿಗೆ ಹಂಚಬೇಕು ಎಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ವಿವಾದದ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ನಡೆಸಿದ್ದಾರೆ.
ಇಂದು ನವದೆಹಲಿಯಲ್ಲಿ ನ್ಯಾಯ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಆ ದೇವರೇ ಬಂದರೂ ನಾವು ಅಧಿಕಾರಕ್ಕೆ ಬಂದ ಮೇಲೆ ಜಾತಿಗಣತಿ ಮಾಡಿಯೇ ತೀರುತ್ತೇವೆ. ನನಗೆ ಜಾತಿ ಮುಖ್ಯವಲ್ಲ, ಸಾಮಾಜಿಕ ನ್ಯಾಯ ಮುಖ್ಯ. ಸಂಪತ್ತನ್ನು ಸಮನಾಗಿ ಎಲ್ಲಾ ವರ್ಗದವರಿಗೂ ಹಂಚಿಕೆ ಮಾಡಬೇಕು ಎಂಬುದೇ ನನ್ನ ಉದ್ದೇಶ. ಆಸ್ತಿ ಹಂಚಿಕೆ ವಿಚಾರದಲ್ಲಿ ನಾವು ಇನ್ನೂ ಏನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಲ್ಲ. ಎಷ್ಟು ಅನ್ಯಾಯವಾಗಿದೆ ಎಂದು ಕಂಡುಹಿಡಿಯೋಣ ಎಂದಷ್ಟೇ ಹೇಳಿದ್ದೇವೆ. ಎಲ್ಲಾ ಲೆಕ್ಕಾಚಾರ ಹಾಕಿಯೇ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದೇವೆ. ಇಷ್ಟಕ್ಕೇ ಮೋದಿಯವರಿಗೆ ನಡುಕ ಬಂದಿದೆ. ಶೇ. 90 ರಷ್ಟು ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಕರೆ ನೀಡಿದ್ದೆ ಅಷ್ಟೇ ಎಂದಿದ್ದಾರೆ.