ಜಾತಿ ಆಧಾರಿತ ಅಲ್ಲ ಆರ್ಥಿಕತೆ ಆಧಾರದಲ್ಲಿ ಮೀಸಲಾತಿ ಬೇಕು ಎಂದ ದೇವೇಗೌಡರು: ನೀವೇನಂತೀರಿ

Krishnaveni K

ಬುಧವಾರ, 18 ಡಿಸೆಂಬರ್ 2024 (10:11 IST)
ನವದೆಹಲಿ: ಒಂದೊಂದು ಪಂಗಡದವರು ತಮಗೆ ಮೀಸಲಾತಿ ಬೇಕು ಎಂದು ಹೋರಾಟ ನಡೆಸುತ್ತಿದ್ದರೆ ಇತ್ತ ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಜಾತಿ ಆಧಾರಿತ ಅಲ್ಲ ಆರ್ಥಿಕತೆ ಆಧಾರಿತ ಮೀಸಲಾತಿ ಬರಲಿ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಸಂವಿಧಾನ ಕುರಿತಾದ ಚರ್ಚೆ ಸಂದರ್ಭದಲ್ಲಿ ಅವರು ಇಂತಹದ್ದೊಂದು ಹೊಸ ವಿಚಾರವನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಮುಂದುವರಿಸಬೇಕೇ ಅಥವಾ ಆರ್ಥಿಕ ಸ್ಥಿತಗತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕೇ ಎನ್ನುವ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.

ಕಳೆದ 75 ವರ್ಷಗಳಿಂದ ದೇಶದಲ್ಲಿ ಮೀಸಲಾತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವವರಿದ್ದಾರೆ. ಮೀಸಲಾತಿಯ ಹೊರತಾದ ಜನರೂ ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಮೀಸಲು ನೀಡಿದ್ದರೂ ಅವರ ಜೀವನ ಏಕೆ ಸುಧಾರಿಸಿಲ್ಲ? ಈ ನಿಟ್ಟಿನಲ್ಲಿ ನಾವು ಚಿಂತನೆ ಮಾಡಬೇಕಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಮೀಸಲಾತಿ ಬಗ್ಗೆ ಮುಂದಿನ ದಿನಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಹಿಂದೆ ಯಾವ ಪರಿಸ್ಥಿತಿಯಲ್ಲಿ ಮೀಸಲಾತಿ ನೀಡಲಾಗಿತ್ತು, ಈಗ ಯಾವ ಪರಿಸ್ಥಿತಿಯಿದೆ ಯಾರು ಕಡುಬಡತನದಲ್ಲಿದ್ದಾರೋ ಅವರನ್ನು ಮಾತ್ರ ಪರಿಗಣಿಸಬೇಕೇ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಮೀಸಲಾತಿ ನೀಡುವಂತಾಗಬೇಕು ಎಂದು ದೇವೇಗೌಡರು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ