ವಂದೇ ಮಾತರಂ ಹಾಡಿನ ಮೂಲಕ ವಿಶ್ವದಾಖಲೆ ಮಾಡಲಿದೆ ಉತ್ತರ ಪ್ರದೇಶ
ಬುಧವಾರ, 3 ಫೆಬ್ರವರಿ 2021 (09:39 IST)
ಲಕ್ನೋ: ಭಾರತದ ರಾಷ್ಟ್ರೀಯ ಹಾಡು ವಂದೇ ಮಾತರಂ ಹಾಡುವ ಮೂಲಕ ಉತ್ತರ ಪ್ರದೇಶ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ.
ಯುಪಿಯ ಯೋಗಿ ಆದಿತ್ಯನಾಥ್ ಸರ್ಕಾರ ಇಂತಹದ್ದೊಂದು ವಿನೂತನ ದಾಖಲೆ ಮಾಡುವ ನಿಟ್ಟಿನಲ್ಲಿ ಆದೇಶ ನೀಡಿದೆ. ಚೌರಿ ಚೌರ ಚಳವಳಿಯ ಶತಮಾನೋತ್ಸವ ಆಚರಣೆ ಅಂಗವಾಗಿ ಇಂತಹದ್ದೊಂದು ದಾಖಲೆಯಾಗಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಅಪರಾಹ್ನ 3 ಗಂಟೆಯವರೆಗೆ ವಂದೇ ಮಾತರಂ ಹಾಡಿನ ಮೊದಲ ಪ್ಯಾರಾವನ್ನು ಸ್ಪಷ್ಟವಾಗಿ ಹಾಡಿ ಒಂದು ನಿಮಿಷಗಳ ವಿಡಿಯೋ ಮಾಡಿ ಕಳುಹಿಸಬೇಕು. ಗಿನ್ನಿಸ್ ರೆಕಾರ್ಡ್ ಬುಕ್ ನ ಶಾಖೆ ಇದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಲಿಂಕ್ ನೀಡಲಿದೆ. ಈ ವೆಬ್ ಸೈಟ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಬೇಕು. ಈ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಸರ್ಕಾರ ಆದೇಶ ನೀಡಿದೆ.