ಪಶ್ಚಿಮ ಬಂಗಾಳ : ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ!
ಭಾನುವಾರ, 9 ಜುಲೈ 2023 (07:28 IST)
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರಕ್ಕೆ 11 ಮಂದಿ ಬಲಿಯಾಗಿದ್ದಾರೆ.
ಹತ್ಯೆಗೀಡಾದವರಲ್ಲಿ 6 ಮಂದಿ ತೃಣಮೂಲ ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿ, ಎಡ, ಕಾಂಗ್ರೆಸ್ ಮತ್ತು ಐಎಸ್ಎಫ್ನ ತಲಾ ಒಬ್ಬೊಬ್ಬರು ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳಿಂದ ಅತಿದೊಡ್ಡ ಭದ್ರತಾ ವೈಫಲ್ಯ ಸಂಭವಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಹಲವೆಡೆ ತೀವ್ರ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು. ಇದಾದ ನಂತರ ಮತದಾನ ದಿನವಾದ ಇಂದೂ ಕೂಡ ಅಂಥದ್ದೇ ಘಟನೆಗಳು ನಡೆದಿವೆ. ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.