ಕಾಡು ಮಾವಿನ ಹಣ್ಣಿನಿಂದ ಈ ಸಿಂಪಲ್ ರೆಸಿಪಿ ಮಾಡಿ

Krishnaveni K

ಸೋಮವಾರ, 15 ಏಪ್ರಿಲ್ 2024 (11:38 IST)
ಬೆಂಗಳೂರು: ಇನ್ನೇನು ಮಾವಿನ ಹಣ್ಣಿನ ಸೀಸನ್ ಆರಂಭವಾಗಿಯೇ ಬಿಟ್ಟಿತು. ಮಾರುಕಟ್ಟೆಯಲ್ಲಿ ಥರ ಥರದ ಮಾವಿನ ಹಣ್ಣು ಖರೀದಿಗೆ ಸಿಗುತ್ತಿದೆ. ಆದರೆ ಇದೆಲ್ಲಕ್ಕಿಂತಲೂ ಕಾಡು ಮಾವಿನ ಹಣ್ಣು ಅದರದ್ದೇ ಆದ ವಿಶೇಷತೆ ಪಡೆದಿದೆ.

ಹಳ್ಳಿಗಳ ಕಡೆ ಮಿಡಿ ಹಾಕಲು ಯೋಗ್ಯವಾದ ಕಾಡು ಮಾವಿನ ಹಣ್ಣು ಮೂರ್ತಿ ಚಿಕ್ಕದಾದರೂ ಅತ್ಯಂತ ರುಚಿಕರ. ಮಾವಿನ ಹಣ್ಣಿನ ನಿಜವಾದ ಸ್ವಾದ ಇದರಲ್ಲಿರುತ್ತದೆ. ಸ್ವಲ್ಪ ಹುಳಿ ಮಿಶ್ರಿತ ಸಿಹಿಯಿರುವ ಕಾಡು ಮಾವಿನ ಹಣ್ಣಿನಿಂದ ಹಳ್ಳಿಗಳಲ್ಲಿ ಅನೇಕ ಆಹಾರ ಪದಾರ್ಥಗಳನ್ನು ಮಾಡುತ್ತಾರೆ.

ಕಾಡು ಮಾವಿನ ಹಣ್ಣಿನ ಸಾಸಿವೆ, ಮಾಂಬಳ, ಸಾರು, ಉಪ್ಪಿನಕಾಯಿ ಹೀಗೆ ಎಲ್ಲವೂ ಅತ್ಯಂತ ರುಚಿಕರ. ಏನಿಲ್ಲವೆಂದರೂ ಊಟ ಮಾಡುವಾಗ ಒಂದು ಕಾಡು ಮಾವಿನ ಹಣ್ಣನ್ನು ಹಾಗೇ ಜೊತೆಗೆ ನೆಚ್ಚಿಕೊಂಡು ಊಟ ಮಾಡುವುದೂ ಅದ್ಭುತ ರುಚಿ ಕೊಡುತ್ತದೆ. ಈ ಮಾವಿನ ಹಣ್ಣಿನಿಂದ ಒಂದು ಸಿಂಪಲ್ ಆದ ಗೊಜ್ಜು ಮಾಡಬಹುದು.

ನಾಲ್ಕೈದು ಕಾಡು ಮಾವಿನ ಹಣ್ಣನ್ನು ಸಿಪ್ಪೆ ಸುಲಿದಿಟ್ಟುಕೊಂಡು ಚೆನ್ನಾಗಿ ಕಿವುಚಿ. ಅದರ ಸಿಪ್ಪೆಯನ್ನೂ ಒಮ್ಮೆ ಕಿವುಚಿಕೊಂಡು ಪೂರ್ತಿ ರಸ ಹೊರಹಾಕಬಹುದು. ಇದಕ್ಕೆ ಒಂದು ಗಾಂಧಾರಿ ಮೆಣಸು ಅಥವಾ ಹಸಿಮೆಣಸಿನ ಕಾಯಿಯನ್ನು ಕಿವುಚಿಕೊಳ್ಳಿ. ಬಳಿಕ ಚಿಟಿಕೆ ಉಪ್ಪು ಸೇರಿಸಿ. ಉಪ್ಪು ಸೇರಿಸಿದರೆ ಅದರ ಹುಳಿ ಅಂಶ ಕಡಿಮೆಯಾಗಿ ಸಿಹಿ ರುಚಿ ಹೆಚ್ಚಾಗುವುದು. ಇದಕ್ಕೆ ಸ್ವಲ್ಪ ಇಂಗು, ಸಾಸಿವೆ, ಕರಿಬೇವು ಹಾಕಿದ ಒಗ್ಗರಣೆ ಕೊಟ್ಟರೆ ರುಚಿಕರ ಗೊಜ್ಜು ಸಿದ್ಧವಾಗುತ್ತದೆ. 10 ನೇ ನಿಮಿಷಗಳಲ್ಲಿ ಅಡುಗೆ ಗೊತ್ತಿಲ್ಲದವರೂ ಸುಲಭವಾಗಿ ಮಾಡಬಹುದಾದ ಗೊಜ್ಜು ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ