ವೆಜ್ ಕುರ್ಮಾ ರೆಸಿಪಿ..

ಸೋಮವಾರ, 24 ಸೆಪ್ಟಂಬರ್ 2018 (14:00 IST)
ಬೆಳಗಿನ ತಿಂಡಿಗಿರಲಿ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕಿರಲಿ ಯಾವುದರ ಜೊತೆಗಾದರೂ, ಯಾವ ಸಮಯಕ್ಕಾದರೂ ವೆಜ್ ಕುರ್ಮಾ ಸರಿಹೊಂದುತ್ತದೆ. ಪೂರಿ, ಚಪಾತಿ, ರೊಟ್ಟಿ, ದೋಸೆ ಹೀಗೆ ಯಾವುದರ ಜೊತೆಗೇ ಆಗಿರಲಿ ವೆಜ್ ಕುರ್ಮಾ ಒಳ್ಳೆಯ ಕಾಂಬಿನೇಶನ್ ಆಗಿದೆ. ಇದು ಅನ್ನದೊಂದಿಗೂ ಸಹ ರುಚಿಯಾಗಿರುತ್ತದೆ. ವೆಜ್ ಕುರ್ಮಾ ರೆಸಿಪಿಗಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
 
ದನಿಯಾ - 1 ಚಮಚ
ಸೋಂಪು - 1 ಚಮಚ
ಜೀರಿಗೆ - 1 ಚಮಚ
ಏಲಕ್ಕಿ - 2-3
ಚೆಕ್ಕೆ - ಒಂದು ಚೂರು
ಮೆಣಸಿನ ಕಾಳು - 7-8
ಒಣ ಮೆಣಸು - 2-3
ಪುಟಾಣಿ - 1 ಚಮಚ
ಹಸಿ ಮೆಣಸು - 1-2
ಶುಂಠಿ - ಒಂದು ಚೂರು
ಬೆಳ್ಳುಳ್ಳಿ - 5-6 ಎಸಳು
ಗೋಡಂಬಿ - 7-8
ಗಸಗಸೆ - 1 ಚಮಚ
ಕಾಯಿ ತುರಿ - 1/4 ಕಪ್
ಎಣ್ಣೆ - ಸ್ವಲ್ಪ
ಈರುಳ್ಳಿ - 1
ಟೊಮೆಟೋ - 1
ಅರಿಶಿಣ - 1/2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಉಪ್ಪು - ರುಚಿಗೆ
ಬಟಾಟೆ - 1
ಹೆಚ್ಚಿದ ಕ್ಯಾರೆಟ್ - 1/2 ಕಪ್
ಹೆಚ್ಚಿದ ಬೀನ್ಸ್ - 1/2 ಕಪ್
ಹೆಚ್ಚಿದ ಗೋಬಿ - 1/2 ಕಪ್
ಹಸಿರು ಬಟಾಣಿ - 1 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
 
ಮಾಡುವ ವಿಧಾನ:
 
ತವಾವನ್ನು ಸ್ಟೌ ಮೇಲಿಟ್ಟು ಬಿಸಿ ಮಾಡಿ ಸಣ್ಣ ಉರಿಯಲ್ಲಿಡಿ. ಒಂದೊಂದು ಚಮಚ ದನಿಯಾ, ಸೋಂಪು, ಜೀರಿಗೆ, ಏಲಕ್ಕಿ, ಮೆಣಸಿನ ಕಾಳು, ಚೆಕ್ಕೆಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಒಣಮೆಣಸು ಮತ್ತು ಪುಟಾಣಿಯನ್ನು ಸೇರಿಸಿ ಹುರಿಯಿರಿ. ಈ ಪದಾರ್ಥಗಳು ಹುರಿದು ಅದರ ಘಮ ಬಂದಾಗ ಅದನ್ನು ಸ್ವಲ್ಪ ಆರಲು ಬಿಟ್ಟು ನಂತರ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿರಿ. ಈ ಮಿಶ್ರಣಕ್ಕೆ 1 ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ನೆನೆಸಿದ ಗೋಡಂಬಿ ಹಾಗೂ ಗಸಗಸೆ, ಕಾಯಿತುರಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ಕುರ್ಮಾ ಮಸಾಲಾ ಸಿದ್ಧವಾಗುತ್ತದೆ.
 
ಈಗ ಒಂದು ಪ್ಯಾನ್‌ನಲ್ಲಿ 2-3 ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ 1 ಹೆಚ್ಚಿದ ಈರುಳ್ಳಿ, 1 ಹೆಚ್ಚಿದ ಟೊಮೆಟೋ, ಅರಿಶಿಣ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಹೆಚ್ಚಿದ ಬಟಾಟೆ, ಕ್ಯಾರೆಟ್, ಬೀನ್ಸ್, ಹಸಿರು ಬಟಾಣಿ ಮತ್ತು ಗೋಬಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಬೇಯಿಸಿ. 5 ನಿಮಿಷದ ನಂತರ ಈ ಮೊದಲೇ ರೆಡಿ ಮಾಡಿಕೊಂಡಿರುವ ಮಸಾಲಾವನ್ನು ಇದಕ್ಕೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ 15-20 ನಿಮಿಷ ಚೆನ್ನಾಗಿ ಕುದಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡರೆ ವೆಜ್ ಕುರ್ಮಾ ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ