ನವದೆಹಲಿ: ನಮಗೆ ಇನ್ನೂ ಕೆಲವು ಗಂಟೆಗಳ ಅವಕಾಶ ಇರುತ್ತಿದ್ದರೆ ವಿನೇಶ್ ಫೋಗಟ್ ತೂಕವನ್ನು 50ಕ್ಕೆ ತಂದು ಇಳಿಸುತ್ತಿದ್ದೇವು. ಆದರೆ ನಮ್ಮ ಕೈಯಲ್ಲಿ ಸಮಯ ಇರಲಿಲ್ಲ ಎಂದು ಪ್ಯಾರಿಸ್ನಲ್ಲಿರುವ ಭಾರತ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ದಿನ್ಶಾ ಪರ್ದಿವಾಲಾ ಅವರು ಬೇಸರ ವ್ಯಕ್ತಪಡಿಸಿದರು.
ಒಲಿಂಪಿಕ್ ಕ್ರೀಡಾಕೂಟದಲ್ಲಿ ತೂಕದ ಸಮಸ್ಯೆಯಿಂದ ಫೈನಲ್ ಹಂತದಲ್ಲಿ ಸ್ಪರ್ಧೆಯಿಂದ ಅನರ್ಹರಾಗಿರುವ ವಿನೇಶ್ ಫೋಗಟ್ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಡೆದ ಸೆಮಿಫೈನಲ್ ಸ್ಪರ್ಧೆಯ ಬಳಿಕ ವಿನೇಶ್ ಅವರು ಅನುಮತಿಸಲಾದ ತೂಕಕ್ಕಿಂತ 2.7 ಕೆಜಿ ಹೆಚ್ಚಾಗಿತ್ತು. ಅವರ ತೂಕ ಇಳಿಕೆಗಾಗಿ ನಮ್ಮ ತಂಡ ಮತ್ತು ಅವರು ತರಬೇತುದಾರರು ವರ್ಕೌಟ್ ಅನ್ನು ಆರಂಭಿಸಿದರು. ಅವರಿಗೆ ನೀಡುತ್ತಿದ್ದ ನೀರಿನ ಮಿತಿಯಲ್ಲಿ ಕಡಿಮೆ ಮಾಡಲಾಯಿತು. ಅದಲ್ಲದೆ ಬೆವರಲು ಕಠಿಣ ವರ್ಕೌಟ್ ಮಾಡಿಸಲಾಯಿತು.
ನಮ್ಮಲ್ಲಿ ಹೆಚ್ಚು ಸಮಯ ಇಲ್ಲದ ಕಾರಣ ರಾತ್ರಿ ಇಡೀ ಅವಳ ತೂಕವನ್ನು ಕಡಿಮೆ ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸಲಾಯಿತು. ಈ ಸಂದರ್ಭದಲ್ಲಿ ಆಕೆಯ ಕೂದಲನ್ನು ಕತ್ತರಿಸಲಾಯಿತು. ನಮ್ಮಲ್ಲಿ ಇನ್ನೂ ಕೆಲವು ಗಂಟೆಗಳಿದ್ದರೆ ನಾವು ಆಕೆಯ ತೂಕದಲ್ಲಿ 100 ಗ್ರಾಂ ಅನ್ನು ಕಡಿಮೆ ಮಾಡುತ್ತಿದ್ದೇವು ಎಂದರು.
ಇನ್ನೂ ವಿನೇಶ್ ಸ್ಪರ್ಧೆಯಿಂದ ಅನರ್ಹಗೊಳ್ಳುತ್ತಿದ್ದ ಹಾಗೇ ಆಕೆಯ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇವೆ. ಪ್ರಸ್ತುತ ಆಕೆ ದೈಹಿಕವಾಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ ಎಂದು ಅವರು ಮಾಹಿತಿ ನೀಡಿದರು.