ಕೋಲ್ಕತ್ತ: ಮುಂಬೈ ಸಿಟಿ ಎಫ್‌ಸಿ ತಂಡವು ಶನಿವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್‌ನ ಫೈನಲ್‌ನಲ್ಲಿ 3-1ರಿಂದ ಆತಿಥೇಯ ಮೋಹನ್ ಬಾಗನ್ ಸೂಪರ್ ಜೈಂಟ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಮಧ್ಯಂತರಕ್ಕೆ ಒಂದು ನಿಮಿಷ ಇರುವಾಗ ಜೇಸನ್ ಕಮಿಂಗ್ಸ್ ಗೋಲು ಹೊಡೆದು ಬಾಗನ್‌ಗೆ ಮುನ್ನಡೆ ಒದಗಿಸಿದಾಗ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ತಂಡವನ್ನು ಹುರಿದುಂಬಿಸಲು ಸೇರಿದ್ದ 62,000 ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತ್ತು.
ಆದರೆ, ಹೋರಾಟ ಬಿಡದ ಮುಂಬೈ ತಂಡವು 53ನೇ ನಿಮಿಷದಲ್ಲೇ ಸ್ಕೋರ್ ಅನ್ನು ಸಮಮಾಡಿಕೊಂಡಿತು. ಆಲ್ಬರ್ಟೊ ನೊಗೆರಾ ಅವರ ಚಿತ್ತಾಕರ್ಷಕ ಪಾಸ್‌ನಲ್ಲಿ ಜಾರ್ಗೆ ಪೆರೆವ್ರಾ ಡಯಾಝ್ ಮೂಲಕ ಗೋಲು ಹೊಡೆದಾಗ ಗ್ಯಾಲರಿಯಲ್ಲಿ ಮೌನ ಆವರಿಸಿತು.
ಬದಲಿ ಆಟಗಾರನಾಗಿ ಆಟಕ್ಕಿಳಿದ ಬಿಪಿನ್ 81ನೇ ನಿಮಿಷ ನಿರ್ಣಾಯಕ ಗೋಲು ಹೊಡೆದು ಮುಂಬೈಗೆ 2-1 ಮುನ್ನಡೆ ಒದಗಿಸಿದರು. ಇಂಜುರಿ ಅವಧಿಯಲ್ಲಿ (90+7) ಮತ್ತೊಬ್ಬ ಸಬ್‌ಸ್ಟಿಟ್ಯೂಟ್ ಜಾಕೋಬ್ ವೊಯ್ಟಸ್ ಅವರು ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಚಾಂಪಿಯನ್ ಮುಂಬೈ ತಂಡವು ಆಕರ್ಷಕ ಟ್ರೋಫಿಯೊಂದಿಗೆ ₹8 ಕೋಟಿ ಬಹುಮಾನ ಪಡೆದರೆ, ರನ್ನರ್ ಅಪ್ ಸ್ಥಾನ ಪಡೆದ ಮೋಹನ್ ಬಾಗನ್ ತಂಡ ₹ 4 ಕೋಟಿ ಬಹುಮಾನವನ್ನು ತಮ್ಮದಾಗಿಸಿಕೊಂಡಿತು.