ಪ್ರೊ ಕಬಡ್ಡಿ ಚಾಂಪಿಯನ್ ಆದ ಪುನೇರಿ ಪಲ್ಟಾನ್

Krishnaveni K

ಶನಿವಾರ, 2 ಮಾರ್ಚ್ 2024 (08:46 IST)
Photo Courtesy: Twitter
ಹೈದರಾಬಾದ್: 10 ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ ಚಾಂಪಿಯನ್ ಆಗಿ ಪುನೇರಿ ಪಲ್ಟಾನ್ ಹೊರಹೊಮ್ಮಿದೆ. ಫೈನಲ್ ನಲ್ಲಿ ಹರ್ಯಾಣ ಸ್ಟೀಲರ್ಸ್ ತಂಡವನ್ನು 25-28 ಅಂಕಗಳಿಂದ ಸೋಲಿಸಿದ ಪುನೇರಿ ಮೊದಲ ಬಾರಿ ಚಾಂಪಿಯನ್ ಆಗಿ ಬೀಗಿತು.

ಪುನೇರಿ ಇದಕ್ಕೆ ಮೊದಲು ಒಮ್ಮೆ ರನ್ನರ್ ಅಪ್ ಆಗಿತ್ತು. ಆದರೆ ಇದೀಗ ಎರಡನೇ ಬಾರಿ ಫೈನಲ್ ಗೇರಿದ್ದು, ಈ ಬಾರಿ ಪ್ರಶಸ್ತಿ ಗೆದ್ದು ಬಂದಿದೆ. ರೈಡರ್ ಗಳಾದ ಪಂಕಜ್ ಮೋಹಿತೆ, ಮೋಹಿತ್ ಗೋಯತ್, ಕ್ಯಾಪ್ಟನ್ ಅಸ್ಲಾಮ್ ಇನಾಮ್ದಾರ್ ಮತ್ತು ಡಿಫೆಂಡರ್ ಗೌರವ ಖರ್ತಿ ಅವರ ಅತ್ಯುತ್ತಮ ಆಟದಿಂದಾಗಿ ಪುನೇರಿ ಪ್ರಶಸ್ತಿ ಗೆಲ್ಲಲು ಸಾಧ‍್ಯವಾಯಿತು. ಪಂಕಜ್ 9, ಮೋಹಿತ್ ಗೋಯತ್ 5, ಅಸ್ಲಾಮ್ 4, ಗೌರವ್ 4 ಅಂಕ ಗಳಿಸಿಕೊಟ್ಟರು.

ಎದುರಾಳಿ ಹರ್ಯಾಣ ಕೂಡಾ ಅತ್ಯುತ್ತಮ ಪೈಪೋಟಿ ನೀಡಿತು. ಹರ್ಯಾಣ ಪರ ಶಿವಂ ಪತಾರೆ, ಸಿದ್ಧಾರ್ಥ್ ದೇಸಾಯ್, ವಿನಯ್ ಮತ್ತು ಮೋಹಿತ್ ಅತ್ಯುತ್ತಮ ಆಟವಾಡಿದರು. ಶಿವಂ 6, ಸಿದ್ಧಾರ್ಥ್ 4, ವಿನಯ್ ಮತ್ತು ಮೋಹಿತ್ ತಲಾ 3 ಅಂಕ ಗಳಿಸಿಕೊಟ್ಟರು. ಆದರೆ ಪ್ರಶಸ್ತಿ ಗೆಲ್ಲಲು ಹರ್ಯಾಣಗೆ ಸಾಧ್ಯವಾಗಲಿಲ್ಲ. ಇದೇ ಮೊದಲ ಬಾರಿಗೆ ಹರ್ಯಾಣ ಫೈನಲ್ ಗೇರಿತ್ತು.

ಹೈದರಾಬಾದ್ ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಗೆದ್ದ ಪುನೇರಿ ತಂಡ 3 ಕೋಟಿ ರೂ. ಬಹುಮಾನ ಮೊತ್ತ ಜೇಬಿಗಿಳಿಸಿದೆ. ರನ್ನರ್ ಅಪ್ ಹರ್ಯಾಣಗೆ 1.8 ಕೋಟಿ ರೂ. ಸಿಗಲಿದೆ.  ಸೆಮಿಫೈನಲ್ ನಲ್ಲಿ ಸೋತ ತಂಡಗಳಿಗೆ 90 ಲಕ್ಷ ರೂ. ಮತ್ತು ಎಲಿಮಿನೇಟರ್ ನಲ್ಲಿ ಸೋತ ತಂಡಗಳಿಗೆ ತಲಾ 45 ಲಕ್ಷ ರೂ. ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ