ಮುಂಬೈ: ಈಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಅವಳಿ ಪದಕ ಗೆದ್ದಿರುವ ಮನು ಭಾಕರ್ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಇವರಿಬ್ಬರು ವಿಭಿನ್ನ ಶೈಲಿಯಲ್ಲಿ ಫೋಟೊಗೆ ಫೋಸ್ ನೀಡಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್ ತಮ್ಮ ನೆಚ್ಚಿನ ಕಾರ್ಯ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈಗೆ ಬಂದಿರುವ ವೇಳೆ ಕ್ರಿಕೆಟಿಗ ಸೂರ್ಯಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್ ಶೂಟಿಂಗ್ ಗನ್ ಹಿಡಿದಂತೆ, ಮನು ಭಾಕರ್ ಬ್ಯಾಟ್ ಬೀಸಿದಂತೆ ನಗುಮುಗದಿಂದಲೇ ಫೋಟೊಗೆ ಫೋಸ್ ನೀಡಿದ್ದಾರೆ.
ಈ ಫೋಟೊವನ್ನು ಮನು ಭಾಕರ್ ಅವರು ತಮ್ಮ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಟೀಮ್ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು! ಎಂದು ಬರೆದುಕೊಂಡಿದ್ದಾರೆ. ಒಲಿಂಪಿಕ್ಸ್ ಪದಕ ಗೆದ್ದಾಗ ಮನು ಭಾಕರ್ ಅವರಿಗೆ ಸೂರ್ಯಕುಮಾರ್ ಎಕ್ಸ್ನಲ್ಲಿ ಅಭಿನಂದನೆ ಸಲ್ಲಿಸಿದ್ದರು.
22 ವರ್ಷದ ಮನು ಭಾಕರ್ ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್‌ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.
ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.