ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಂದರ್ಶನವೊಂದರಲ್ಲಿ ತಮ್ಮ ಪುತ್ರ ಇಝಾನ್, ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಮುಂದೆ ಮೂರು ಬಾರಿ ಗರ್ಭಿಣಿಯಾಗಲು ರೆಡಿ ಆದರೆ ಇದೊಂದು ಕೆಲಸ ನನಗೆ ಕಷ್ಟ ಎಂದಿದ್ದಾರೆ.
ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟ್ ತಾರೆ ಶೊಯೇಬ್ ಮಲಿಕ್ ರನ್ನು 2010 ರಲ್ಲಿ ವಿವಾಹವಾಗಿದ್ದರು. ಈಗ ಇಬ್ಬರೂ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದಾರೆ. ಸಾನಿಯಾ 2018 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಮಗುವಿನ ಜನನದ ಬಳಿಕ ತಮ್ಮ ಜೀವನದ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಮಗುವಿನ ಜನನದ ಬಳಿಕ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕಷ್ಟವೆನಿಸಿತು. ನನ್ನ ಮಗುವಿಗೆ ನಾನು 2.5 ಅಥವಾ 3 ತಿಂಗಳು ಎದೆಹಾಲುಣಿಸಿದೆ. ನನ್ನ ಪ್ರಕಾರ ಇದು ಅತ್ಯಂತ ಕಷ್ಟಕರ ಸಮಯ. ಮುಂದೆ ನಾನು ಮೂರು ಬಾರಿ ಗರ್ಭಿಣಿಯಾಗಲು ರೆಡಿ. ಆದರೆ ಬಹುಶಃ ಎದೆಹಾಲುಣಿಸಲು ಕಷ್ಟ. ನನ್ನ ಪ್ರಕಾರ ಇದು ಕೇವಲ ದೈಹಿಕ ಪ್ರಕ್ರಿಯೆಯಲ್ಲ, ಮಾನಸಿಕ ಮತ್ತು ಭಾವನಾತ್ಮಕವಾಗಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಗು ನಿಮ್ಮ ಮೇಲೆಯೇ ಆಹಾರಕ್ಕಾಗಿ ಅವಲಂಬಿತವಾಗಿರುತ್ತದೆ. ಅದೊಂದು ಬದ್ಧತೆಯಾಗಿರುತ್ತದೆ, ನಿದ್ರೆಯಿರಲ್ಲ, ನಿಮ್ಮ ಎಲ್ಲಾ ಚಟುವಟಿಕೆಗಳನ್ನು ಮಗುವಿಗೆ ಹಾಲುಣಿಸಲು ಬೇಕಾಗಿ ಪಕ್ಕಕ್ಕಿಡಬೇಕಾಗುತ್ತದೆ. ನನಗೆ ಅದು ಕಷ್ಟವೆನಿಸಿತು. ಮಗು ಹುಟ್ಟಿದ ಕೆಲವೇ ದಿನಕ್ಕೆ ನಾನು ದೆಹಲಿಗೆ ಹೋಗಬೇಕಿತ್ತು. ನನ್ನ ಕುಟುಂಬದವರ ಸಹಾಯವಿದ್ದಿದ್ದರಿಂದ ಹೋಗಲು ಅನುಕೂಲವಾಯಿತು. ಮಗುವಾದಾಗ ನಿಮ್ಮ ಕುಟುಂಬದವರ ನೆರವು ಬೇಕು. ಇಲ್ಲದೇ ಹೋದರೆ ನನ್ನಂತಹ ವೃತ್ತಿಪರರಿಗೆ ಕಷ್ಟವಾಗಬಹುದು. ನಾನು ನನ್ನ ವೈದ್ಯರ ಬಳಿ ಮಾತನಾಡಿ ಮೂರು ತಿಂಗಳಿಗೇ ಮಗುವಿಗೆ ಎದೆಹಾಲುಣಿಸುವುದನ್ನು ನಿಲ್ಲಿಸಿದೆ ಎಂದು ಸಾನಿಯಾ ಹೇಳಿದ್ದಾರೆ.