ಪ್ಯಾರಿಸ್: 100 ಗ್ರಾಂ ತೂಕ ಹೆಚ್ಚಳವಾಗಿದ್ದಾರೆ ಎಂಬ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಫೈನಲ್ ಸ್ಪರ್ಧೆಯಿಂದ ಅನರ್ಹಗೊಂಡ ಬೇಸರದಲ್ಲೇ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ವಿದಾಯ ಘೋಷಿಸಿದ್ದಾರೆ.
ವಿನೇಶ್ ಫೋಗಟ್ ಪ್ರಕರಣ ಈಗ ವಿಶ್ವದಾದ್ಯಂತ ಸುದ್ದಿ ಮಾಡಿದೆ. ಭಾರತದ ಪ್ರಧಾನಿ ಮೋದಿ ಕೂಡಾ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥೆ ಪಿಟಿ ಉಷಾಗೆ ಖುದ್ದು ಕರೆ ಮಾಡಿ ವಿನೇಶ್ ಫೈನಲ್ ಆಡಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಮಾಡಿ ಎಂದು ಆದೇಶ ನೀಡಿದ್ದರು.
ಹಾಗಿದ್ದರೂ ನಿಯಮ ಎಂದ ಮೇಲೆ ನಿಯಮವೇ ಎಂದು ಪಟ್ಟು ಹಿಡಿದಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ವಿನೇಶ್ ಅನರ್ಹತೆಯನ್ನು ಎತ್ತಿ ಹಿಡಿದಿದೆ. ಒಂದು ವೇಳೆ ವಿನೇಶ್ ಸ್ಪರ್ಧಿಸಿ ಸೋತಿದ್ದರೂ ಭಾರತಕ್ಕೆ ಬೆಳ್ಳಿ ಪದಕವಂತೂ ಖಾತ್ರಿಯಾಗುತ್ತಿತ್ತು. ಆದರೆ ಈಗ ಫೈನಲ್ ಆಡುವ ಅರ್ಹತೆಯನ್ನೇ ಅವರು ಕಳೆದುಕೊಂಡಿದ್ದಾರೆ. ಇಡೀ ದೇಶವೇ ಅವರ ಬೆನ್ನಿಗೆ ನಿಂತಿದೆ.
ಈ ವಿವಾದದ ನಡುವೆ ವಿನೇಶ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ತಾಯಿ ಕುಸ್ತಿ ಗೆದ್ದಳು, ನಾನು ಸೋತೆ. ನಿಮ್ಮ ಕನಸು, ನನ್ನ ಸಾಮರ್ಥ್ಯ ಎಲ್ಲವೂ ಈಗ ಚೂರು ಚೂರಾಗಿದೆ ಇದಕ್ಕೆ ಕ್ಷಮೆಯಿರಲಿ. ಈಗ ನನ್ನ ಬಳಿ ಹೆಚ್ಚು ಶಕ್ತಿಯಿಲ್ಲ. 2001-2024 ಕುಸ್ತಿಯಿಂದ ನಾನು ವಿರಮಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ವಿನೇಶ್ ಟ್ವೀಟ್ ಮಾಡಿ ವಿದಾಯ ಘೋಷಿಸಿದ್ದಾರೆ.